ಬೆಂಗಳೂರು : ವರನಟ, ಪದ್ಮಭೂಷಣ ಡಾ. ರಾಜ್ ಕುಮಾರ್ ಅವರ ಹೆಸರಲ್ಲಿ ರಾಘವೇಂದ್ರ ರಾಜ್ ಕುಮಾರ್, ಕಿರಿಯ ಪುತ್ರ ಯುವರಾಜ್ ರಾಜ್ ಕುಮಾರ್ ಮತ್ತು ಪತ್ನಿ, ಶ್ರೀದೇವಿ ಸೇರಿ ಸ್ಥಾಪಿಸಿರುವ ಡಾ. ರಾಜ್ ಕುಮಾರ್ ಸಿವಿಲ್ ಸರ್ವೀಸ್ ಅಕಾಡೆಮಿ ಈ ವರ್ಷವು ಮತ್ತೊಂದು ಮೈಲಿಗಲ್ಲು ಸಾಧಿಸಿದೆ. 2022 ಹಾಗು 2023ರ ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ 14 ಅಭ್ಯರ್ಥಿಗಳು ಉತ್ತೀರ್ಣರಾಗುವ ಮೂಲಕ ಅಕಾಡೆಮಿಯ ಕೀರ್ತಿ ಹೆಚ್ಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಕಾಡೆಮಿ ಇಂದು ಜ್ಞಾನಜ್ಯೋತಿ ಸಭಾಂಗಣದಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಉತ್ತೀರ್ಣರಾದ ಅಭ್ಯರ್ಥಿಗಳನ್ನು ಸನ್ಮಾನಿಸಿದರು.
ಮಾಜಿ ರಕ್ಷಣಾ ಕಾರ್ಯದರ್ಶಿ ಡಾ.ಶ್ರೀನಿವಾಸನ್, ಭಾರತೀಯ ಸೇನಾ ಸಿಬ್ಬಂದಿಯ ಮಾಜಿ ಉಪ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ರಮೇಶ್ ಹಲಗಲಿ, ಮಾಜಿ ಪ್ರಧಾನ ಮುಖ್ಯ ಆಯುಕ್ತ ಕೆ.ಸತ್ಯನಾರಾಯಣ, ಕೃಷಿ ವಿಶ್ವವಿದ್ಯಾನಿಲಯದ ಮಾಜಿ ಉಪಕುಲಪತಿ ಕೆ.ನಾರಾಯಣ ಗೌಡ ಅವರನ್ನು ಸನ್ಮಾನಿಸಲಾಯಿತು. ಅಕಾಡೆಮಿಯ ಪ್ರೇರಣಾ ಶಕ್ತಿ ರಾಘವೇಂದ್ರ ರಾಜ್ ಕುಮಾರ್ ಹಾಗೂ ದಿವಂಗತ ನಟ ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ವೇದಿಕೆಯಲ್ಲಿದ್ದರು.
ಸಿಎಂ ಸಿದ್ದರಾಮಯ್ಯ ಮಾತನಾಡಿ, "ರಾಜ್ ಕುಮಾರ್ ಅವರದ್ದು ಅತ್ಯಂತ ಸರಳ ವ್ಯಕ್ತಿತ್ವ. ಪ್ರತಿಯೊಬ್ಬರನ್ನೂ ಗೌರವದಿಂದ ಕಾಣುವ ದೊಡ್ಡ ಸಂಸ್ಕಾರದ ರಾಯಭಾರಿ ಆಗಿದ್ದವರು. ರಾಜ್ ಅವರ ಬದುಕಿನಿಂದ ನಾವು ಕಲಿಯಬೇಕಾದ್ದು, ರೂಢಿಸಿಕೊಳ್ಳಬೇಕಾದ್ದು ತುಂಬಾ ಇದೆ. ರಾಜ್ ಕುಮಾರ್ ಅಕಾಡೆಮಿ ಅಪಾರ ಯಶಸ್ಸು ಗಳಿಸಲು ರಾಘವೇಂದ್ರ ರಾಜ್ ಕುಮಾರ್ ಮತ್ತು ಅಕಾಡೆಮಿ ಸಿಬ್ಬಂದಿಯ ಕೊಡುಗೆ ಅಪಾರವಿದೆ" ಎಂದರು.
ಸಿದ್ದರಾಮಯ್ಯ ಕಿವಿಮಾತು: ಜಾತಿ ತಾರತಮ್ಯದ ಕಾರಣದಿಂದ ಶಿಕ್ಷಣದಿಂದ ವಂಚಿತರಾದವರು ಅಪಾರ ಸಂಖ್ಯೆಯಲ್ಲಿದ್ದಾರೆ. ಇವರಿಗೆ ಶಿಕ್ಷಣದ ಜತೆಗೆ ಬದುಕಿನ ಅವಕಾಶಗಳೂ ದೊರಕುವುದಿಲ್ಲ. ಯುಪಿಎಸ್ಸಿಯಲ್ಲಿ ತೇರ್ಗಡೆ ಹೊಂದಿದವರು ಈ ಅಸಮಾನತೆ ಮತ್ತು ಜಾತಿ ವ್ಯವಸ್ಥೆಯನ್ನು ಅಳಿಸುವ ಮೂಲಕ ದೇಶದ ಮತ್ತು ಸಮಾಜದ ಪ್ರಗತಿಗೆ ಶ್ರಮಿಸಬೇಕು ಎಂದು ಸಿಎಂ ಕಿವಿಮಾತು ಹೇಳಿದರು.
ರಾಜ್ ಕುಮಾರ್ ಹಾಗು ತಮ್ಮ ನಡುವಿನ ಒಡನಾಟದ ನೆನಪನ್ನು ಸಿದ್ದರಾಮಯ್ಯ ಮೆಲುಕು ಹಾಕಿದರು. ನಾನು ರಾಜ್ ಅವರನ್ನು ಭೇಟಿ ಮಾಡಲು ಹೋದಾಗಲೆಲ್ಲ "ಬನ್ನಿ ಬನ್ನಿ ನಮ್ ಕಾಡಿನವರು" ಎಂದು ಖುಷಿಯಿಂದ ಕರೆಯುತ್ತಿದ್ದರು. ನಾವಿಬ್ಬರೂ ಒಂದೇ ಜಿಲ್ಲೆಯವರು ಎಂದು ಸ್ಮರಿಸಿದರು. ನಾನು ಮುಖ್ಯಮಂತ್ರಿ ಆಗುವುದಕ್ಕೆ ಸಮಾಜದ ಕೊಡುಗೆ ಹೆಚ್ಚಿದೆ. ಹೀಗಾಗಿ ಸಮಾಜಕ್ಕೆ ಧನ್ಯತೆ ಅರ್ಪಿಸುತ್ತೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಇದನ್ನೂ ಓದಿ : ಯುಪಿಎಸ್‌ಸಿ ಪರೀಕ್ಷೆಯಲ್ಲಿ ಡಾ ರಾಜ್‍ಕುಮಾರ್ ಅಕಾಡೆಮಿಯಿಂದ 11 ಮಂದಿ ಪಾಸ್..