ಬೆಂಗಳೂರು: ಮಹಿಳೆಗೆ ಸಾಕುನಾಯಿ ಕಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಸೂಚಿಸಿ ಆರ್.ಆರ್.ನಗರ ಠಾಣೆ ಪೊಲೀಸರು ನಟ ದರ್ಶನ್ ಅವರಿಗೆ ನೋಟಿಸ್ ಜಾರಿ ಮಾಡಿದ್ದು, ಇಂದು ಅವರು ಹಾಜರಾದರು.
ದರ್ಶನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡ ಬಳಿಕ ಮೂರು ದಿನದೊಳಗೆ ಠಾಣೆಗೆ ಬಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ನಲ್ಲಿ ತಿಳಿಸಿದ್ದರು. ಆದರೆ ದರ್ಶನ್ ಹಾಜರಾಗಿರಲಿಲ್ಲ. ಬಳಿಕ ಎರಡನೇ ಬಾರಿ ನೋಟಿಸ್ ಜಾರಿ ಮಾಡಿದ್ದು ಇಂದು ಬೆಳಿಗ್ಗೆ 11.30ಕ್ಕೆ ಠಾಣೆಗೆ ಬರುವಂತೆ ಸೂಚಿಸಿದ್ದರು.
ಅಕ್ಟೋಬರ್ 28ರಂದು ಖಾಸಗಿ ಆಸ್ಪತ್ರೆಯ ಏರ್ಪಡಿಸಲಾಗಿದ್ದ ಕಾರ್ಯಕ್ರಮವೊಂದಕ್ಕೆ ತೆರಳಿದ್ದ ದೂರುದಾರೆ ಅಮಿತಾ ಜಿಂದಾಲ್ ಎಂಬವರು ದರ್ಶನ್ ಮನೆ ಮುಂಭಾಗದ ರಸ್ತೆಯ ಖಾಲಿ ಜಾಗದಲ್ಲಿ ತಮ್ಮ ಕಾರು ಪಾರ್ಕ್ ಮಾಡಿದ್ದರು. ವಾಪಸ್ ತೆರಳಲು ಕಾರಿನ ಬಳಿ ಬಂದಾಗ ಅಕ್ಕಪಕ್ಕದಲ್ಲಿದ್ದ ಮೂರು ನಾಯಿಗಳನ್ನು ಕಂಡು ಅಮಿತಾ, ತಾವು ಕಾರ್ ಬಳಿ ಹೋಗಬೇಕು, ನಾಯಿಗಳನ್ನು ಕರೆದುಕೊಂಡು ಹೋಗಿ ಎಂದಿದ್ದರು. ಇದಕ್ಕೆ ಪ್ರತಿಯಾಗಿ ಸ್ಥಳದಲ್ಲಿದ್ದ ದರ್ಶನ್ ಅವರ ಮನೆ ಕೆಲಸಗಾರ ಗಲಾಟೆ ಮಾಡಿದರು ಎಂಬುದು ಅವರ ಆರೋಪ.
ಇಬ್ಬರ ನಡುವಿನ ವಾಗ್ವಾದದ ವೇಳೆ ನಾಯಿಯೊಂದು ಅಮಿತಾ ಅವರ ಮೇಲೆರಗಿದೆ. ನೆಲಕ್ಕೆ ಬಿದ್ದಾಗ ಮೇಲೆ ಮತ್ತೊಂದು ನಾಯಿ ಬಂದು ಹೊಟ್ಟೆಯ ಭಾಗಕ್ಕೆ ಕಚ್ಚಿತು ಎಂದು ಆರೋಪಿಸಿ ಆರ್.ಆರ್.ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಾಯಿಗಳು ಕಚ್ಚುತ್ತವೆ ಎಂದು ತಿಳಿದಿದ್ದರೂ ಸಹ ಅವುಗಳನ್ನು ನಿಯಂತ್ರಿಸದೇ ಕೆಲಸಗಾರ ಸುಮ್ಮನಿದ್ದ ಎಂದು ಅಮಿತಾ ಜಿಂದಾಲ್ ಆರೋಪಿಸಿದ್ದರು.
ಪೊಲೀಸರ ವಿರುದ್ಧ ಅಸಮಾಧಾನ: ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸರಿಯಾಗಿ ಸ್ಪಂದಿಸಿಲ್ಲ. ನನಗೆ ನ್ಯಾಯ ಸಿಗದಿದ್ದರೆ ನ್ಯಾಯಾಲಯದ ಮೊರೆ ಹೋಗುತ್ತೇನೆ. ನಾನು ವಕೀಲೆ, ಈ ಬಗ್ಗೆ ಹೇಗೆ ಹೆಜ್ಜೆ ಇಡಬೇಕೆಂಬುದು ನನಗೆ ತಿಳಿದಿದೆ ಎಂದು ದೂರುದಾರೆ ಅಸಮಾಧಾನ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಸಾಕು ನಾಯಿಗಳು ಕಚ್ಚಿದ ಆರೋಪ: ಪೊಲೀಸರ ವಿರುದ್ಧ ದೂರುದಾರೆಯ ಆಕ್ರೋಶ