ದೇವನಹಳ್ಳಿ (ಬೆಂಗಳೂರು): ರಾಜ್ಯ ವಿಧಾನಸಭಾ ಚುನಾವಣೆ ಸಮೀಪವಾಗ್ತಿದ್ದಂತೆ ಟಿಕೆಟ್ಗಾಗಿ ಎಲ್ಲೆಡೆ ಫೈಟ್ ನಡೆಯುತ್ತಿದೆ. ಇನ್ನು, ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಜೆಡಿಎಸ್ ಶಾಸಕ ನಿಸರ್ಗ ನಾರಾಯಣಸ್ವಾಮಿಗೆ ಟಿಕೆಟ್ ನೀಡದಂತೆ ಒಂದು ಬಣ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿ ಅವರ ನಿವಾಸ ಮುಂದೆ ಜಮಾಯಿಸಿದ್ದಾರೆ.
ಕುಮಾರಸ್ವಾಮಿ ಮನೆ ಮುಂದೆ ಜೆಡಿಎಸ್ ಕಾರ್ಯಕರ್ತರು ಪರೇಡ್ ನಡೆಸಿ ಜೆಡಿಎಸ್ ಅಭ್ಯರ್ಥಿ ಹಾಲಿ ಶಾಸಕ ನಿಸರ್ಗ ನಾರಾಯಣಸ್ವಾಮಿಗೆ ಟಿಕೆಟ್ ನೀಡದಂತೆ ಮನವಿ ಮಾಡಿದ್ದಾರೆ. 200ಕ್ಕೂ ಹೆಚ್ಚು ಕಾರ್ಯಕರ್ತರು ಬೆಂಗಳೂರಿನ ಹೆಚ್ ಡಿ ಕುಮಾರಸ್ವಾಮಿ ಮನೆ ಮುಂದೆ ಜಮಾವಣೆಗೊಂಡು ಹಾಲಿ ಶಾಸಕರಿಗೆ ಟಿಕೆಟ್ ನೀಡಬಾರದೆಂದು ಒತ್ತಾಯಿಸಿದ್ದಾರೆ. ಇನ್ನು, ಈಗಾಗಲೇ ಹಾಲಿ ಶಾಸಕ ನಿಸರ್ಗ ನಾರಾಯಣಸ್ವಾಮಿಗೆ ಶಾಸಕಾಂಗ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿ ಟಿಕೆಟ್ ಫೈನಲ್ ಮಾಡಿದ್ದಾರೆ.
ಹೀಗಿದ್ದು ಶಾಸಕರ ವಿರೋಧಿ ಗುಂಪಿನ ವಿಶ್ವನಾಥ್, ನಂಜೇಗೌಡ ಸೇರಿದಂತೆ ಇನ್ನಿತರ ಕಾರ್ಯಕರ್ತರು ನಿಸರ್ಗ ನಾರಾಯಣಸ್ವಾಮಿಗೆ ಟಿಕೆಟ್ ನೀಡದಂತೆ ಒತ್ತಾಯ ಮಾಡುತ್ತಿದ್ದಾರೆ. ನಿಸರ್ಗ ನಾರಾಯಣಸ್ವಾಮಿಗೆ ಟಿಕೆಟ್ ನೀಡಿದರೆ ಕ್ಷೇತ್ರದಲ್ಲಿ ಈ ಬಾರಿ ಜಾತ್ಯಾತೀತ ಜನತಾದಳ ಗೆಲ್ಲೋದಿಲ್ಲ ಎಂದು ಒಂದು ಬಣ ಕುಮಾರಸ್ವಾಮಿ ಮನೆ ಕದ ತಟ್ಟಿದ್ದಾರೆ. ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಅಂತಾ ಶಾಸಕರ ವಿರುದ್ಧ ಜೆಡಿಎಸ್ ಮುಖಂಡ ವಿಶ್ವ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೊಸ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ಶಾಸಕ ನಿಸರ್ಗ ವಿರೋಧಿ ಬಣ ಆಗ್ರಹಿಸಿದ್ದಾರೆ. ಈ ಬಗ್ಗೆ ಶಾಸಕ ನಿಸರ್ಗ ನಾರಾಯಣಸ್ವಾಮಿಗೆ ಫೋನ್ ಮುಖಾಂತರ ಸಂಪರ್ಕಿಸಿದರೆ, ಈಗಾಗಲೇ ನನಗೆ ಟಿಕೆಟ್ ಘೋಷಿಸಲಾಗಿದೆ. ಕೆಲವರು ಸುಖಸುಮ್ಮನೆ ಅಪಪ್ರಚಾರ ಮಾಡುತ್ತಿದ್ದಾರೆ, ಮಾಡಿಕೊಳ್ಳಲಿ ಬಿಡಿ ಎಂದು ತಿಳಿಸಿದ್ದಾರೆ.
ಜನತಾದಳ ಮುಖಂಡ ನಂಜೇಗೌಡ ಮಾತನಾಡಿ,' ನಾವು ಇಂದು ಹಾಲಿ ಜೆಡಿಎಸ್ ಶಾಸಕ ನಿಸರ್ಗ ನಾರಾಯಣಸ್ವಾಮಿಗೆ ಟಿಕೆಟ್ ನೀಡದಂತೆ ಒತ್ತಾಯಿಸಲು ಕುಮಾರಸ್ವಾಮಿ ಅವರ ಮನೆಗೆ ಬಂದಿದ್ದೇವೆ. ಅವರಿಗೆ ಟಿಕೆಟ್ ಕೊಟ್ಟರೆ ಕ್ಷೇತ್ರದಲ್ಲಿ ಜೆಡಿಎಸ್ ಗೆಲ್ಲುವುದು ಕಷ್ಟ ಇದೆ. ಇನ್ನು, ಸಚಿವ ಸ್ಥಾನ ನೀಡುವುದಾಗಿ ಕುಮಾರಸ್ವಾಮಿಯವರು ಹೇಳಿಕೆ ನೀಡಿದ್ದಾರೆ. ಮಂತ್ರಿ ಸ್ಥಾನ ನೀಡಲು ಸಾಧ್ಯವೇ ಇಲ್ಲ, ಅವರು ನಮ್ಮ ಕ್ಷೇತ್ರದಲ್ಲಿ ನಿಂತರೆ ಗೆಲುವು ಕನಸಿನ ಮಾತು. ಹೊಸ ಅಭ್ಯರ್ಥಿಯನ್ನು ಕ್ಷೇತ್ರದಲ್ಲಿ ನಿಲ್ಲಿಸಿದರೆ ಗೆಲುವು ಖಚಿತ. ಹಾಲಿ ಜೆಡಿಎಸ್ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರ ಮೇಲೆ ದೇವನಹಳ್ಳಿಯಲ್ಲಿ ವಿಶ್ವಾಸ ಕಡಿಮೆಯಾಗಿದೆ' ಎಂದರು.
ಜೆಡಿಎಸ್ ಮುಖಂಡ ವಿಶ್ವ ಮಾತನಾಡಿ, ' ತಾಲೂಕಿನ ಎಲ್ಲಾ ಮುಖಂಡರು ಬೇಸರಗೊಂಡು ದೇವನಹಳ್ಳಿಯ ಅಭ್ಯರ್ಥಿಯನ್ನು ಬದಲಾವಣೆ ಮಾಡಬೇಕು ಎಂದು ಒತ್ತಾಯಿಸುತ್ತಿದ್ದೇವೆ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುವ ಉದ್ದೇಶದಿಂದ ನಮ್ಮ ಕ್ಷೇತ್ರದಿಂದ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಕಳಿಸಬೇಕು ಎಂಬ ಉದ್ದೇಶದಿಂದ ಬಂದಿದ್ದೇವೆ. ದೇವನಹಳ್ಳಿಯಲ್ಲಿ ಈವರೆಗೆ ಸತತ ಎರಡು ಬಾರಿ ಗೆಲುವು ದಾಖಲಾಗಿರಲಿಲ್ಲ, ಕಳೆದ ಬಾರಿ ಗೆಲುವು ಸಾಧಿಸುವ ಮೂಲಕ ದಾಖಲೆ ಆಗಿತ್ತು. ಮೂರನೇ ಬಾರಿಯೂ ಜೆಡಿಎಸ್ನ್ನು ಅಧಿಕಾರಕ್ಕೆ ತರುವ ಉದ್ದೇಶದಿಂದ ಅಭ್ಯರ್ಥಿಯನ್ನು ಬದಲಿಸುವಂತೆ ಒತ್ತಾಯಿಸುತ್ತಿದ್ದೇವೆ' ಎಂದು ಹೇಳಿದರು.
ಇದನ್ನೂ ಓದಿ: ಅರಕಲಗೂಡು ಕ್ಷೇತ್ರಕ್ಕೆ ಎ ಮಂಜು ಜೆಡಿಎಸ್ ಅಭ್ಯರ್ಥಿ: ಹೆಚ್ ಡಿ ಕುಮಾರಸ್ವಾಮಿ