ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ತುಂಬೆಯಲ್ಲಿರುವ ನೀರಾ ಘಟಕವನ್ನು ವಹಿಸಿಕೊಳ್ಳಲು ವಿಟ್ಲದ ಜಿಲ್ಲಾ ತೆಂಗು ಬೆಳೆಗಾರರ ರೈತ ಉತ್ಪಾದಕ ಸಂಘ ಮುಂದೆ ಬಂದಿದೆ. ಅವರಿಗೆ ವಿಸ್ತೃತ ಯೋಜನಾ ವರದಿ ನೀಡುವಂತೆ ತಿಳಿಸಲಾಗಿದೆ ಎಂದು ತೋಟಗಾರಿಕಾ ಇಲಾಖೆ ಸಚಿವ ಮುನಿರತ್ನ ತಿಳಿಸಿದ್ದಾರೆ. ವಿಧಾನಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ನ ಹರೀಶ್ ಕುಮಾರ್ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ತುಂಬೆಯಲ್ಲಿರುವ ನೀರಾ ಘಟಕ ಪುನರಾರಂಭ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆ ತುಂಬೆಯ ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದ ನೀರಾ ಘಟಕ ಚಾಲನೆ ಆಗಿಲ್ಲ. 2017 ರಲ್ಲಿ ಕೇರಳಾದಿಂದ ಸಂಸ್ಥೆ ಬಂದಿದ್ದು, ಪಿಪಿಪಿ ಮಾಡಲ್ನಲ್ಲಿ ನೀರಾ ಘಟಕ ಪ್ರಾರಂಭಕ್ಕೆ ಒಡಂಬಡಿಕೆ ಆಗಿತ್ತು.
ನಂತರ ಅವರು ಘಟಕ ಪ್ರಾರಂಭಕ್ಕೆ ಬರಲಿಲ್ಲ. ಆದಾದ ಬಳಿಕ ಹೊಸ ಟೆಂಡರ್ ಕರೆದಿದ್ದೆವು. ಈಗ ಹೊಸದಾಗಿ ವಿಟ್ಲದ ಜಿಲ್ಲಾ ತೆಂಗು ಬೆಳೆಗಾರರ ರೈತ ಉತ್ಪಾದಕ ಸಂಘದವರು ಬಂದಿದ್ದಾರೆ. ಅವರಿಗೆ ಡಿಪಿಆರ್ ಮಾಡೋಕೆ ಸೂಚನೆ ಕೊಡಲಾಗಿದೆ. ನೀರಾ ಘಟಕ ಸ್ಥಾಪನೆಗೆ ಕ್ರಮವಹಿಸುತ್ತೇವೆ ಎಂದರು.
ಶೇ.50 ಸೀಟು ಮೀಸಲು: ಕೃಷಿ ವಿಶ್ವವಿದ್ಯಾಲಯಗಳಲ್ಲಿ ರೈತರ ಮಕ್ಕಳಿಗೆ ಶೇ. 50ರಷ್ಟು ಸೀಟುಗಳನ್ನು ಮೀಸಲು ಇಡಲಾಗಿದೆ. ಈ ವರ್ಷದಿಂದಲೇ ನೂತನ ಎರಡು ಕೃಷಿ ವಿವಿ ಪ್ರಾರಂಭ ಮಾಡುತ್ತೇವೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ವಿಧಾನಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಪ್ರತಿಪಕ್ಷ ಸಚೇತಕ ಪ್ರಕಾಶ್ ರಾಥೋಡ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೃಷಿ ವಿವಿಗಳಲ್ಲಿ ಸುಮಾರು 133 ಕೋರ್ಸ್ಗಳು ಇವೆ. ರಾಜ್ಯದ ಕೃಷಿ ವಿವಿಯಲ್ಲಿ 1,844 ಸೀಟು ಇವೆ. ಇದರಲ್ಲಿ 922 ಸೀಟುಗಳು ರೈತರ ಮಕ್ಕಳಿಗೆ ಸಿಗುತ್ತದೆ. ಈ ವರ್ಷದ ಬಜೆಟ್ನಲ್ಲಿ ಬಳ್ಳಾರಿ ಮತ್ತು ಬೆಳಗಾವಿಯಲ್ಲಿ ಕೃಷಿ ವಿವಿ ಪ್ರಾರಂಭಕ್ಕೆ ಘೋಷಣೆ ಮಾಡಿದ್ದಾರೆ. ಈ ವರ್ಷದಿಂದಲೇ ನೂತನ ಎರಡು ಕೃಷಿ ವಿವಿ ಪ್ರಾರಂಭ ಮಾಡುತ್ತೇವೆ ಎಂದರು.
ಕೋಚ್ ನೇಮಕ: ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲೂಕು ಕ್ರೀಡಾಂಗಣಗಳಲ್ಲೂ ಕ್ರೀಡಾಪಟುಗಳ ತರಬೇತಿಗಾಗಿ ಕೋಚ್ ನೇಮಕ ಮಾಡಲಾಗುತ್ತದೆ. ಈ ಸಂಬಂಧ ಶೀಘ್ರವೇ ಇಲಾಖೆಯಲ್ಲಿ ಸಿ ಅಂಡ್ ಆರ್ ರೂಲ್ ಮಾಡುತ್ತೇವೆ ಎಂದು ಯುವಜನ ಸೇವೆ ಮತ್ತು ಕ್ರೀಡಾ ಸಚಿವ ನಾರಾಯಣಗೌಡ ಭರವಸೆ ನೀಡಿದ್ದಾರೆ.
ವಿಧಾನಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ರಾಜ್ಯದ ಕ್ರೀಡಾ ಇಲಾಖೆ ತರಬೇತುದಾರರನ್ನ ಖಾಯಂ ಮಾಡಬೇಕು. ಮೊದಲು ಕೋಚ್ಗಳ ನೇಮಕ ಆಗಿತ್ತು. ಬಳಿಕ ಅವ್ರನ್ನ ತೆಗೆದು ಹಾಕಲಾಗಿದೆ. ಕೋಚ್ಗಳನ್ನ ಖಾಯಂ ಮಾಡಿ. ಕ್ರೀಡಾ ಇಲಾಖೆಯಲ್ಲಿ ಸಿ ಅಂಡ್ ಆರ್ ರೂಲ್ ಸರಿಯಾಗಿ ಆಗಿಲ್ಲ. ಕೂಡಲೇ ಸಿ ಅಂಡ್ ಆರ್ ರೂಲ್ ಮಾಡಿ. ಶಾಶ್ವತ ಹುದ್ದೆಗಳನ್ನು ಇಲಾಖೆಯಲ್ಲಿ ಸೃಜನೆ ಮಾಡಿ ಎಂದು ಕಾಂಗ್ರೆಸ್ನ ಯುಬಿ ವೆಂಕಟೇಶ ಮತ್ತು ಬಿಜೆಪಿಯ ಸಂಕನೂರು ಒತ್ತಾಯಿಸಿದರು.
ಇದನ್ನೂ ಓದಿ: ಭೂ ಒಡೆತನದಲ್ಲಿ ಅಕ್ರಮವೆಸಗಿದ್ರೆ ಕ್ರಿಮಿನಲ್ ಕೇಸ್ : ಕೋಟ ಶ್ರೀನಿವಾಸ ಪೂಜಾರಿ
ಇದಕ್ಕೆ ಉತ್ತರಿಸಿದ ಸಚಿವ ನಾರಾಯಣ ಗೌಡ, ಉಮಾದೇವಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಗುತ್ತಿಗೆ ಆಧಾರದಲ್ಲಿ ಇರುವವರನ್ನು ಖಾಯಂ ಮಾಡಲು ಸಾಧ್ಯವಿಲ್ಲ ಅಂತ ಹೇಳಿದೆ. ಪ್ರತಿ ತಾಲೂಕಿಗೂ ಕೋಚ್ಗಳ ನೇಮಕಕ್ಕೆ ನಿನ್ನೆ ಶಿಕ್ಷಣ ಇಲಾಖೆ ಜೊತೆ ಚರ್ಚೆ ಆಗಿದೆ. ರಾಜ್ಯದಲ್ಲಿ 29 ಜಿಲ್ಲೆಗಳಲ್ಲಿ ಜಿಲ್ಲಾ ಕ್ರೀಡಾಂಗಣಗಳಿವೆ. ಅದರಲ್ಲಿ 120 ತಾಲೂಕುಗಳಲ್ಲಿ ತಾಲೂಕು ಕ್ರೀಡಾಂಗಣಗಳಿವೆ. ಪ್ರತಿ ತಾಲೂಕಿಗೂ ಕೋಚ್ ನೇಮಕ ಮಾಡುತ್ತೇವೆ. ಶೀಘ್ರವೇ ಇಲಾಖೆಯಲ್ಲಿ ಸಿ ಅಂಡ್ ಆರ್ ರೂಲ್ ಮಾಡುತ್ತೇವೆ ಎಂದು ಹೇಳಿದರು.
ಕ್ರೀಡಾ ವಿವಿ ಸ್ಥಾಪನೆ: ಯಲಹಂಕದಲ್ಲಿ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪನೆ ಮಾಡುತ್ತಿದ್ದೇವೆ. ಇದಕ್ಕೆ ಬೇಕಾದ ಜಮೀನು ಗುರುತಿಸಲಾಗಿದೆ. ಕೊಡಗಿನಲ್ಲಿ ಸಬ್ ಬ್ರಾಂಚ್ ರೀತಿ ಕ್ರೀಡಾಂಗಣ ವ್ಯವಸ್ಥೆ ಮಾಡುತ್ತೇವೆ ಎಂದು ಕಾಂಗ್ರೆಸ್ ಸದಸ್ಯೆ ವೀಣಾ ಅಚ್ಚಯ್ಯ ಪ್ರಶ್ನೆಗೆ ಸಚಿವ ನಾರಾಯಣಗೌಡ ಉತ್ತರಿಸಿದರು.