ಬೀದಿ ನಾಯಿಗಳ ಹಾವಳಿ ತಪ್ಪಿಸಲು ಮತ್ತು ಸಾರ್ವಜನಿಕರಿಗಾಗುವ ತೊಂದರೆ ನಿಯಂತ್ರಿಸಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೂ ಈ ಸಮಸ್ಯೆಯನ್ನು ಸಂಪೂರ್ಣವಾಗಿ ನಿಯಂತ್ರಿಸುವುದು ಕಷ್ಟಸಾಧ್ಯ. ಸರ್ಕಾರಿ ಆಸ್ಪತ್ರೆಗಳಲ್ಲಿ ಆ್ಯಂಟಿ ರೇಬಿಸ್ ವ್ಯಾಕ್ಸಿನ್ ಮತ್ತು ರೇಬಿಸ್ ಸಂಬಂಧಿತ ಔಷಧಿ ಅಗತ್ಯಕ್ಕೆ ತಕ್ಕಂತೆ ಇದೆಯಾ ಎಂಬುದರ ಕುರಿತ ಅವಲೋಕನ ಇಲ್ಲಿದೆ.
ರಾಜಧಾನಿ ಬೆಂಗಳೂರಿನಲ್ಲಿ 2020-21 ನೇ ಸಾಲಿನಲ್ಲಿ ಬೀದಿ ನಾಯಿಗಳ ಸಮಸ್ಯೆಗೆ ಸಂಬಂಧಿಸಿದಂತೆ 3,027 ದೂರುಗಳು ಬಂದಿವೆ. ದೂರುಗಳು ಬಂದ ತಕ್ಷಣ ಪಾಲಿಕೆ ಸೂಕ್ತ ಕ್ರಮ ಕೈಗೊಂಡಿರುವುದು ಶ್ಲಾಘನಾರ್ಹ. 53,800 ಬೀದಿ ನಾಯಿಗಳಿಗೆ ಹುಚ್ಚುರೋಗ ನಿರೋಧಕ ಲಸಿಕೆ ಹಾಕುವ ಕಾರ್ಯಯನ್ನು ಪಾಲಿಕೆ ಮಾಡಿದೆ. ಬೀದಿನಾಯಿ, ಸಾಕು ನಾಯಿಗಳು ಕಚ್ಚಿದ ಸಂದರ್ಭ ಬಿಬಿಎಂಪಿ ನೇತೃತ್ವದ ಆಸ್ಪತ್ರೆಗಳು ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ.
ರೇಬಿಸ್ ಸೋಂಕು ಪರೀಕ್ಷೆಗೆ ಒಳಪಡಿಸಿದ ಬೀದಿ ನಾಯಿಗಳಲ್ಲಿ ಶೇ. 83 ರಷ್ಟು ಶ್ವಾನಗಳಿಗೆ ರೇಬಿಸ್ ಸೋಂಕಿನ ಲಕ್ಷಣ ಕಂಡುಬಂದಿರುವುದು ಮತ್ತೊಂದು ಆಘಾತಕಾರಿ ವಿಚಾರ. ಹಾಗಾಗಿ ನಾಯಿ ಕಚ್ಚಿದ ಕೂಡಲೇ ಲಸಿಕೆ ಹಾಕಿಸಿಕೊಳ್ಳುವುದರ ಜತೆಗೆ ಶ್ವಾನಗಳಿಗೂ ಆ್ಯಂಟಿ ರೇಬಿಸ್ ಚುಚ್ಚುಮದ್ದು ಹಾಕಿಸಿ ಸಮಸ್ಯೆ ನಿಯಂತ್ರಿಸಬೇಕಾಗಿದೆ.
ಗಣಿನಾಡು ಬಳ್ಳಾರಿ ಜಿಲ್ಲೆಯಾದ್ಯಂತ ಆ್ಯಂಟಿ ರೇಬಿಸ್ ವ್ಯಾಕ್ಸಿನ್ ಮತ್ತು ಇಮ್ಯುನೋಗ್ಲೋಬಿನ್ ಔಷಧಿ ಅಗತ್ಯಕ್ಕೆ ಅನುಗುಣವಾಗಿದೆ. ಈ ಬಾರಿಗೆ 43 ಸಾವಿರದಷ್ಟು ಡೋಸ್ ಅನ್ನು ಸಂಗ್ರಹಣೆ ಮಾಡಿಟ್ಟುಕೊಳ್ಳಲಾಗಿದೆ.
ಒಮ್ಮೆ ರೇಬಿಸ್ ರೋಗ ಬಂತೆಂದರೆ ಬದುಕುಳಿಯಲು ಹರಸಾಹಸ ಪಡುವ ಪರಿಸ್ಥಿತಿ ನಿರ್ಮಾಣವಾಗುವುದು ಖಚಿತ. ಹಾಗಾಗಿ, ನಾಯಿ ಕಚ್ಚಿದ ಕೂಡಲೇ ನಿರ್ಲಕ್ಷ್ಯ ವಹಿಸದೇ ರೇಬಿಸ್ ಲಸಿಕೆ ಪಡೆಯಬೇಕಿದೆ. ನಾಯಿಗಳಳ್ಲೂ ಸೋಂಕು ಹರಡುವುದನ್ನು ನಿಯಂತ್ರಿಸಬೇಕಿದೆ.