ಬೆಂಗಳೂರು : ಕೋವಿಡ್-19ರ ಮೂರನೇ ಅಲೆಯ ಭೀತಿಯ ನಡುವೆ ಗೌರಿ ಗಣೇಶ ಹಬ್ಬ ಆಚರಣೆಗೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಬೆಂಗಳೂರಲ್ಲಿ ಗಣೇಶೋತ್ಸವಕ್ಕೆ 3 ದಿನ ಮಾತ್ರ ಹಬ್ಬಕ್ಕೆ ಅನುಮತಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿಯಲ್ಲಿ ಬಿಬಿಎಂಪಿ ಮತ್ತು ಪೊಲೀಸರ ಕಾರ್ಯ ಹೇಗಿರಬೇಕು ಎಂಬುದರ ಕುರಿತು ಚರ್ಚಿಸಲಾಯಿತು.
ಇದೀಗ ಬಿಬಿಎಂಪಿ ಬೆಂಗಳೂರಲ್ಲಿ 3 ದಿನಗಳ ಹಬ್ಬಕ್ಕೆ ಅನುಮತಿ ನೀಡಿ ಕೆಲವು ಷರತ್ತುಗಳನ್ನೂ ವಿಧಿಸಿದೆ. ಕೊರೊನಾ 3ನೇ ಅಲೆಯ ನಡುವೆ ಜನಸಾಗರ ಸೇರಿದಂತೆ ಬಿಗಿ ಕ್ರಮಕ್ಕೆ ಪೊಲೀಸ್ ಇಲಾಖೆ ಮತ್ತು ಬಿಬಿಎಂಪಿ ಸಜ್ಜಾಗಿದೆ. ವಾರ್ಡ್ಗಳಲ್ಲಿ ಒಂದು ಸಾಮೂಹಿಕ ಗಣೇಶೋತ್ಸವಕ್ಕೆ ಮಾತ್ರ ಅನುಮತಿ ನೀಡಲಾಗಿದೆ.
ಪ್ರತಿ ವಾರ್ಡ್ನಲ್ಲಿ ಒಂದೇ ಗೌರಿ-ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡಲಾಗಿದೆ. ಇದಕ್ಕೆ ಸ್ಥಳವನ್ನು ಗುರುತಿಸಲಾಗುವುದು. ಆ ಬಳಿಕ ಪೊಲೀಸರಿಗೂ ಮಾಹಿತಿ ನೀಡಬೇಕು. ಬಿಬಿಎಂಪಿ ಮೂಲಕ ಅನುಮತಿ ಪಡೆದುಕೊಳ್ಳಬೇಕಾಗಿದೆ ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.
ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮಾತನಾಡಿ, ಸಾರ್ವತ್ರಿಕ ಗಣೇಶೋತ್ಸವಕ್ಕೆ ಸರ್ಕಾರ ಅನುಮತಿ ನೀಡಿದರೂ ಜನ ಗುಂಪು ಗುಂಪಾಗಿ ಸೇರುವಂತಿಲ್ಲ. ವಾದ್ಯಗೋಷ್ಠಿ ಸೇರಿದಂತೆ ಸಾಂಸ್ಕೃತಿಕ ಕಾರ್ಯಾಕ್ರಮಕ್ಕೆ ಅನುಮತಿ ನಿರಾಕರಿಸಲಾಗಿದೆ.
ಇನ್ನು, ವಾರ್ಡ್ಗಳಲ್ಲಿ ಮೊಬೈಲ್ ಟ್ಯಾಂಕರ್ ಸಂಚರಿಸಲಿದ್ದು, ಗಣೇಶ ವಿಸರ್ಜನೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಮನೆಗಳಲ್ಲಿ ಪ್ರತಿಷ್ಠಾಪಿಸುವ ಗಣೇಶಮೂರ್ತಿಗಳನ್ನು ಮನೆಯ ಟ್ಯಾಂಕ್ನಲ್ಲೇ ವಿಸರ್ಜನೆ ಮಾಡಬೇಕು. ಇಲ್ಲವೇ ಮೊಬೈಲ್ ಟ್ಯಾಂಕರ್ನಲ್ಲಿ ವಿಸರ್ಜಿಸಬೇಕು ಎಂದು ಹೇಳಿದ್ದಾರೆ.
ಈ ಸಲ ಯಡಿಯೂರು, ಹಲಸೂರು, ಸ್ಯಾಂಕಿ, ಹೆಬ್ಬಾಳ ಸೇರಿ ಯಾವುದೇ ಕೆರೆಗಳಲ್ಲಿ ವಿಸರ್ಜನೆಗೆ ಅವಕಾಶ ನೀಡದಿರಲು ತೀರ್ಮಾನಿಸಲಾಗಿದೆ. ಪರಿಸರಕ್ಕೆ ಮಾರಕವಾಗುವ ಗಣೇಶನನ್ನು ಕೂರಿಸುವಂತಿಲ್ಲ.
ಮೂರು ದಿನಗಳ ಅವಕಾಶ ಬಳಿಕ ಯಾರು ಗಣೇಶನನ್ನ ಕೂರಿಸುವಂತಿಲ್ಲ. ನಿಯಮ ಮೀರಿ ಗಣೇಶ ಪ್ರತಿಷ್ಠಾಪನೆ ಮಾಡಿದ್ರೆ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ. ಸಾರ್ವಜನಿಕರು ಕೋವಿಡ್ ಹಿನ್ನೆಲೆ ಸಹಕಾರ ನೀಡಬೇಕೆಂದು ಮನವಿ ಮಾಡಿದ್ದಾರೆ.
ಓದಿ: ಗಣೇಶ ಹಬ್ಬಕ್ಕೆ KSRTC ಬಂಪರ್ ಆಫರ್: 1000 ಬಸ್ ರಸ್ತೆಗಿಳಿಸಿದ ಇಲಾಖೆ