ಬೆಂಗಳೂರು: ಮರಳು ಗಣಿಗಾರಿಕೆ ಸಂಬಂಧ ನಿಯಮಗಳನ್ನು ಸರಳಗೊಳಿಸಿದ್ದೇವೆ. ಮರಳು ಸುಲಭವಾಗಿ ಸಿಗುವಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.
ವಿಕಾಸ ಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2021ರ ನೂತನ ಗಣಿ ನೀತಿ ತರಲು ಚಿಂತನೆ ನಡೆಸಲಾಗಿದೆ. ಹಳ್ಳ, ಕೊಳ್ಳಗಳಲ್ಲಿ ಸಿಗುವ ಉಸುಕು ಬಳಕೆಗೆ ಅವಕಾಶ ಕಲ್ಪಿಸುವುದು, ಎತ್ತಿನಗಾಡಿ, ಟ್ರ್ಯಾಕ್ಟರ್ಗಳಲ್ಲಿ ತರಲು ಅವಕಾಶ ಮಾಡಿಕೊಡಲು ತೀರ್ಮಾನ ಕೈಗೊಳ್ಳಲಾಗಿದೆ. ಈ ಸಂಬಂಧ ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದೇನೆ. ಇಲ್ಲಿಯವರೆಗೆ ಎಲ್ಲದಕ್ಕೂ ಕಡಿವಾಣವಿತ್ತು. ಸಣ್ಣ ರೈತರು, ಜನಸಾಮಾನ್ಯರಿಗೆ ಮರಳು ಸಿಕ್ಕಿರಲಿಲ್ಲ. ಗ್ರಾಮೀಣ ಭಾಗದಲ್ಲಿ ಆಶ್ರಯ ಮನೆಗಳಿಗೂ ಸಿಗುತ್ತಿರಲಿಲ್ಲ. ಈಗ ಸುಲಭವಾಗಿ ಬಳಸಿಕೊಳ್ಳಲು ಅವಕಾಶ ಮಾಡಿಕೊಡುತ್ತೇವೆ ಎಂದರು.
ಮಹಾರಾಷ್ಟ್ರದಲ್ಲಿ ಎಲ್ಲದಕ್ಕೂ ಎಫ್ಐಆರ್ ಹಾಕ್ತಿದ್ರು. ಗಾಡಿ, ಬೈಕ್, ಕತ್ತೆಗಳಲ್ಲಿ ಸಾಗಿಸಿದ್ರೂ ಎಫ್ಐಆರ್ ಹಾಕುತ್ತಿದ್ದಾರೆ. ಆದರೆ ಇಲ್ಲಿ ಅವುಗಳಿಗೆ ಅವಕಾಶ ನೀಡಬಾರದೆಂದು ಚಿಂತನೆ ಮಾಡಿದ್ದೇವೆ. ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ ಕ್ರಮ. ಗಣಿ ನೀತಿಗಳನ್ನು ಸರಳೀಕರಣಗೊಳಿಸುತ್ತೇವೆ ಎಂದರು.
ಮೈನಿಂಗ್ನಿಂದ 3700 ಕೋಟಿ ರೂ. ರಾಯಲ್ಟಿ ಬರುತ್ತಿದೆ. ರೆವಿನ್ಯೂ ಮತ್ತಷ್ಟು ಹೆಚ್ಚಿಸುವ ಬಗ್ಗೆ ನಿರ್ಧರಿಸಿದ್ದೇವೆ. ಪ್ರಸ್ತುತ 3 ಕಮಿಟಿ ರಚಿಸಿದ್ದೇವೆ. ಆಂಧ್ರಕ್ಕೆ ಇಂದು ಒಂದು ಕಮಿಟಿ ಹೋಗಿದೆ. ಅಲ್ಲಿನ ನೀತಿಯ ಬಗ್ಗೆ ಅಧ್ಯಯನ ಮಾಡಿ, ವರದಿ ನೀಡಲಿದೆ. ವಿಭಾಗವಾರು ಕಮಿಟಿ ರಚನೆಯಾಗಿದೆ. ಸುಲಭವಾಗಿ ಎಲ್ಲರಿಗೂ ಮರಳು ಸಿಗಬೇಕು. ನೈಸರ್ಗಿಕವಾಗಿಯೂ ಅಪಾಯ ಆಗಬಾರದು. ತಾಂತ್ರಿಕವಾಗಿ ಹೇಗೆ ಮಾಡಬಹುದು ಎಂಬ ಬಗ್ಗೆ ನಿಯಮ ತರುತ್ತೇವೆ ಎಂದರು.
ವೈಜ್ಞಾನಿಕವಾಗಿ ಮರಳು ತೆಗೆಯುವ ಬಗ್ಗೆ ನೀತಿಯಲ್ಲಿರಲಿದೆ. ಎಷ್ಟು ಮರಳು ತೆಗೆಯಬಹುದು, ಮರಳು, ಮಣ್ಣು, ಗರಸು ಎಂದು ವಿಭಾಗಿಸುತ್ತೇವೆ. ಮರಳನ್ನ ಮಾತ್ರ ತೆಗೆಯಲು ಅವಕಾಶ ಸಿಗಲಿದೆ. ಈಗಾಗಲೇ ಒಂದು ಡ್ರಾಫ್ಟ್ ತಂದಿದ್ದೇವೆ. ಉ.ಕ, ಕರಾವಳಿಯಲ್ಲಿ ಒಂದೊಂದು ನೀತಿ ಇವೆ. ಇದನ್ನೆಲ್ಲವನ್ನೂ ಬಗೆಹರಿಸುವ ಬಗ್ಗೆ ಈ ನೀತಿ ತರುತ್ತಿದ್ದೇವೆ ಎಂದರು.
ಲೋಕಾಯುಕ್ತ ತನಿಖೆ:
ಅಧಿಕಾರಿಗಳ ಮೇಲೆ ಲೋಕಾಯುಕ್ತ ತನಿಖೆ ವಿಚಾರ ಮಾತನಾಡಿ, ಮೈನಿಂಗ್ ಅಧಿಕಾರಿಗಳ ಮೇಲೆ ಆರೋಪ ಪ್ರಕರಣ ದಾಖಲಾಗಿದೆ. ನಾನು ಇತ್ತೀಚೆಗಷ್ಟೇ ಇಲಾಖೆ ವಹಿಸಿಕೊಂಡಿದ್ದೇನೆ. ಅದರ ಬಗ್ಗೆ ಹೆಚ್ಚಿನ ಗಮನಹರಿಸುತ್ತೇನೆ. ಒಂದು ಕ್ರಶರ್ ಹಾಕಬೇಕಾದರೆ 10 ಕೋಟಿ ರೂ. ಬೇಕು. ನಾವು ಅದಕ್ಕೆ ಕಡಿವಾಣ ಹಾಕಿದರೆ ಕಷ್ಟ. ಅವನು ಬಂಡವಾಳ ಹಾಕಿದ್ದು ವೇಸ್ಟ್ ಆಗಲಿದೆ. ಅದಕ್ಕೆ ಪರಿಹಾರ ಹುಡುಕಬೇಕಲ್ಲ, ಆ ನಿಟ್ಟಿನಲ್ಲಿ ನಾವು ಯೋಚಿಸುತ್ತಿದ್ದೇವೆ ಎಂದರು.
ಓದಿ: ಅಕ್ರಮ ಗಣಿಗಾರಿಕೆ ಬಗ್ಗೆ ಎಲ್ಲಾ ಜಿಲ್ಲೆಗಳಿಂದ ದೂರು ಬರುತ್ತಿವೆ : ಸಚಿವ ಮುರುಗೇಶ್ ನಿರಾಣಿ
ಬಂದ್ ಆಗಿರುವ ಗಣಿಗಳ ಬಗ್ಗೆಯೂ ಚರ್ಚೆ ನಡೆಯಲಿದೆ. ಜಿಲ್ಲಾವಾರು ಮಾಹಿತಿ ಕೋರಿದ್ದೇವೆ. ನಮ್ಮ ಗಣಿ ಭೂ ವಿಜ್ಞಾನ ಅಧಿಕಾರಿಗಳಿಂದ ಕೇಳಿದ್ದೇವೆ. ಏಕ ಗವಾಕ್ಷಿ ಪದ್ಧತಿ ಮೂಲಕ ಎಲ್ಲವನ್ನೂ ತರುತ್ತೇವೆ. ಅರಣ್ಯ, ಕಂದಾಯ ಎಲ್ಲಾ ಇಲಾಖೆ ಒಟ್ಟಿಗೆ ಸೇರುವಂತೆ ಕ್ರಮ ಕೈಗೊಳ್ಳುತ್ತೇವೆ. ಗಣಿ ಇಲಾಖೆಯಲ್ಲಿ ಸಾವಿರಾರು ಕೇಸ್ಗಳಿವೆ. ಎಲ್ಲಾ ಕೇಸ್ ಅಧ್ಯಯನ ಮಾಡಿ ಪರಿಹಾರ ಮಾಡುವ ಬಗ್ಗೆ ಚರ್ಚೆ ನಡೆಸಿದ್ದೇನೆ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದರು.