ಬೆಂಗಳೂರು: ನಗರದಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಸರ್ಕಾರಿ ಕೋಟಾದಡಿ ಹನ್ನೊಂದು ಸಾವಿರ ಬೆಡ್ಗಳನ್ನು ಖಾಸಗಿ ಹಾಗೂ ಸರ್ಕಾರಿ ಸಂಸ್ಥೆಯಿಂದ ಪಡೆಯಲಾಗಿದೆ. ಈ ಪೈಕಿ ಸದ್ಯ 1300 ಬೆಡ್ ಲಭ್ಯವಿದೆ. ಆದರೆ ಜನರು ಕೇಳುವ ಆಕ್ಸಿಜನ್ ಬೆಡ್, ಐಸಿಯುಗಳ ಸಂಖ್ಯೆ ಕಡಿಮೆ ಇದೆ. ಜನರಲ್ ಬೆಡ್ಗಳನ್ನು ಆಕ್ಸಿಜನ್ ಬೆಡ್ ಮಾಡುವ ಬಗ್ಗೆ ಖಾಸಗಿ ಸಂಸ್ಥೆಗಳೊಂದಿಗೆ ಮಾತುಕತೆ ನಡೆಯುತ್ತಿದ್ದು, ಹೆಚ್ಚು ಆಕ್ಸಿಜನ್ ಬೆಡ್ ಮಾಡಲಾಗುವುದು ಎಂದರು.
ಇನ್ನು 14 ಸಿಸಿಸಿ ಸೆಂಟರ್‌ಗಳಲ್ಲಿ ಈಗಾಗಲೇ 2,081 ಬೆಡ್ ಗಳು ಖಾಲಿ ಇವೆ. ಇದರಲ್ಲಿ 168 ಬೆಡ್ಗಳಲ್ಲಿ ಆಕ್ಸಿಜನ್ ವ್ಯವಸ್ಥೆ ಇದೆ. ಹತ್ತು ಕಡೆಗಳಲ್ಲಿ ಹೊಸ ಸೆಂಟರ್ಗಳನ್ನು ಕೂಡಾ ನಿರ್ಮಾಣ ಮಾಡಲಾಗುತ್ತಿದೆ. ಹೊಸದಾಗಿ ವೈದ್ಯರು, ಪ್ಯಾರಾಮೆಡಿಕಲ್ ಅವರ ನೇಮಕ ಕೂಡಾ ನಡೆಸಲಾಗುತ್ತದೆ. ಇಲ್ಲಿ ದೈಹಿಕವಾಗಿ ವೈದ್ಯರು ರೋಗಿಯನ್ನು ಪರಿಶೀಲಿಸಿ, ಚಿಕಿತ್ಸೆ ನೀಡಲಿದ್ದಾರೆ.
ಕೋವಿಡ್ ಸೋಂಕಿನಿಂದ ಆಸ್ಪತ್ರೆಗೆ ಸೇರುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರತಿನಿತ್ಯ 22 ಸಾವಿರ ಜನರಿಗೆ ಕೋವಿಡ್ ಪಾಸಿಟಿವ್ ದೃಢಪಡುತ್ತಿದೆ. ಆಸ್ಪತ್ರೆಗೆ ಸೇರುತ್ತಿರುವವರ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಬೆಡ್ ಸಮಸ್ಯೆ ಆಗುತ್ತಿದೆ ಎಂದು ಗೌರವ್ ಗುಪ್ತಾ ತಿಳಿಸಿದರು.
ನಗರದಲ್ಲಿ ಪಾಸಿಟಿವಿಟಿ ಪ್ರಮಾಣ ಶೇ 35 ಇದ್ದು, ರ್ಯಾಟ್ ಕಿಟ್ ಹೆಚ್ಚು ಪಡೆದು, ಟೆಸ್ಟಿಂಗ್ ಪ್ರಮಾಣ ಹೆಚ್ಚಿಸಲಾಗುವುದು.
ನಗರದಲ್ಲಿ 17 ಆಕ್ಸಿಜನ್ ರಿಫಿಲ್ಲರ್ಸ್ ಇದ್ದಾರೆ. ಅವರ ಬಳಿಯೂ ಮಾತುಕತೆ ನಡೆಸಲಾಗುತ್ತದೆ. ಏನೇನು ಕೊರತೆಗಳಿವೆ, ಎಷ್ಟು ಆಕ್ಸಿಜನ್ ವಿತರಣೆ ಆಗುತ್ತಿದೆ, ಯಾರಿಗೆಲ್ಲ ವಿತರಿಸುತ್ತಿದ್ದೀರಿ ಎಂಬ ಬಗ್ಗೆಯೂ ಸಭೆ ನಡೆಯಲಿದೆ ಎಂದು ಹೇಳಿದರು.