ಬೆಂಗಳೂರು: ಕೊಡವ ಬುಡಕಟ್ಟು ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕುಲಶಾಸ್ತ್ರೀಯ ಅಧ್ಯಯನ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ. ಶಾಸಕ ಎ.ಎಸ್.ಪೊನ್ನಣ್ಣ ಅವರ ನೇತೃತ್ವದಲ್ಲಿ ಕೊಡವ ರಾಷ್ಟ್ರೀಯ ಮಂಡಳಿಯ ನಿಯೋಗವು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ತಮ್ಮನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಈ ವಿಷಯ ತಿಳಿಸಿದರು.
ಕೊಡಗರು ಎಂದು ನಮೂದಾಗಿರುವ ಕೊಡವ ಸಮುದಾಯದ ಹೆಸರನ್ನು ಕೊಡವ ಎಂದು ತಿದ್ದುಪಡಿ ಮಾಡಿ ಗೆಜೆಟ್ ಅಧಿಸೂಚನೆ ಹೊರಡಿಸಲು ಕೂಡ ಕ್ರಮ ವಹಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು. ಈ ವೇಳೆ ಕೊಡವ ರಾಷ್ಟ್ರೀಯ ಮಂಡಳಿ ಎನ್.ಯು ನಾಚಪ್ಪ ಅವರ ನೇತೃತ್ವದ 30 ಜನರ ನಿಯೋಗ ಹಾಗೂ ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ, ಕೆ.ಟಿ. ಪೆಮ್ಮಯ್ಯ, ಉಪಾಧ್ಯಕ್ಷರಾದ ಕರ್ನಲ್ ವಿವೇಕ್ ಮುತ್ತಣ್ಣ, ಮತ್ತಿತರರು ಉಪಸ್ಥಿತರಿದ್ದರು.
ಕೊಡವರಿಗೆ ಪ್ರತ್ಯೇಕ ಸ್ಥಾನಮಾನ ವಿಚಾರವಾಗಿ ಆಕ್ಷೇಪಣೆ ಸಲ್ಲಿಸಲು ಸೂಚಿಸಿದ್ದ ಹೈಕೋರ್ಟ್: ಕೊಡವರಿಗೆ ಪ್ರತ್ಯೇಕ ಸ್ಥಾನಮಾನಕ್ಕಾಗಿ ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ಸಲ್ಲಿಸಿರುವ ಮನವಿ ಪರಿಗಣಿಸಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿರುವ ಅರ್ಜಿಯ ಸಂಬಂಧ ನಾಲ್ಕು ವಾರಗಳಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸಲು ಜು.14ರಂದು ಹೈಕೋರ್ಟ್ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿತ್ತು. ಬಿಜೆಪಿ ಮುಖಂಡ, ರಾಜ್ಯಸಭಾ ಸದಸ್ಯರೂ ಆದ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂ.ಜೆ.ಎಸ್. ಕಮಲ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತ್ತು.
ಕೊಡವ ಸಮುದಾಯದವರು ವಿಭಿನ್ನ ಭೌಗೋಳಿಕ ಹಾಗೂ ಸಂಸ್ಕೃತಿ ಹಿನ್ನೆಲೆ ಹೊಂದಿದ್ದಾರೆ. ಇದರಿಂದ ಸಂವಿಧಾನದ ಪರಿಚ್ಛೇದ 242 ಅಡಿ ಸ್ಟೇಟ್ ಆಫ್ ಕೂರ್ಗ್ ಎಂದು ಗುರುತಿಸಲಾಗಿದೆ. ಅದರಂತೆ ಸ್ಟೇಟ್ ಆಫ್ ಕೂರ್ಗ್‌ಗೆ ಲೋಕಸಭೆ ಮತ್ತು ರಾಜ್ಯಸಭೆಗೆ ತಲಾ ಒಬ್ಬ ಸದಸ್ಯರನ್ನು ಕಳುಹಿಸಲು ಅವಕಾಶವಿದೆ. ಸಿ ಸ್ಟೇಟ್ಸ್ ಕಾಯ್ದೆ- 1952ರ ಪ್ರಕಾರ ಕೂರ್ಗರು ಭಾರತೀಯ ಒಕ್ಕೂಟದ ಸಿ ಸ್ಟೇಟ್ ಭಾಗವಾಗಿದೆ. ಕೂರ್ಗ್ ಸ್ವಯಂ ಅವಲಂಬಿತ ಸ್ಟೇಟ್ ಆಗಿದ್ದು, 1956ರಲ್ಲಿ ಮೈಸೂರು ರಾಜ್ಯದೊಂದಿಗೆ ವಿಲೀನ ಮಾಡಲಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿತ್ತು. ಈ ವಾದ ಆಲಿಸಿದ್ದ ಕೋರ್ಟ್ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಿತ್ತು.
ಇದನ್ನೂ ಓದಿ: ಕೊಡವ ನಾಡಲ್ಲಿ 'ಅಂಗೋಲ-ಪೊಂಗೋಲ': ಇದು ಮಹಾದೇವರ ದೊಡ್ಡ ಹಬ್ಬ