ಬೆಂಗಳೂರು: ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಯಾದ ನಂತರ 1,329 ಕೇಸು ದಾಖಲಿಸಿದ್ದು, ಹತ್ತು ಸಾವಿರ ಹಸುಗಳ ರಕ್ಷಣೆ ಮಾಡಲಾಗಿದೆ. ಗೋವಾಗೆ ದನದ ಮಾಂಸ ಕಳಿಸುತ್ತಿರುವ ಆರೋಪದ ಕುರಿತು ಪರಿಶೀಲನೆ ನಡೆಸಿ ಗೋ ಮಾಂಸ ಸಾಗಣೆ ಮಾಡುತ್ತಿರುವುದು ಕಂಡು ಬಂದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಹರೀಶ್ ಕುಮಾರ್ ಕೇಳಿದ ರಾಜ್ಯದ ಪ್ರತಿ ಜಿಲ್ಲೆಯಿಂದ ಗೋವಾಕ್ಕೆ ಪ್ರತಿದಿನ ರಫ್ತು ಮಾಡಲಾಗುವ ದನ ಮತ್ತು ಎಮ್ಮೆ ಮಾಂಸದ ಪ್ರಮಾಣದ ಕುರಿತು ಪ್ರಶ್ನೆಗೆ ಉತ್ತರಿಸಿದ ಸಚಿವರು, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಲ್ಲು ಜಾನುವಾರುಗಳ ಮಾಂಸದ ರಫ್ತು ಮಾಡುವ ಅಂಕಿ - ಅಂಶಗಳ ಮಾಹಿತಿಯನ್ನು ಇಲಾಖೆ ನಿರ್ವಹಿಸುವುದಿಲ್ಲ, ಇದು ಇಲಾಖೆ ವ್ಯಾಪ್ತಿಗೆ ಬರಲ್ಲ. ಆದರೂ ನಗರಾಭಿವೃದ್ಧಿ ಇಲಾಖೆ, ವಾಣಿಜ್ಯ ಇಲಾಖೆ ಮತ್ತು ಕೈಗಾರಿಕಾ ಇಲಾಖೆ ಮತ್ತು ಆರ್ಥಿಕ ಇಲಾಖೆ (ಜಿಎಸ್ಟಿ ವಿಭಾಗ) ಗಳಿಂದ ಮಾಹಿತಿ ಕೋರಲಾಗಿತ್ತು.
ನಗರಾಭಿವೃದ್ಧಿ ಇಲಾಖೆಯು ಈ ಪ್ರಶ್ನೆ ಅನ್ವಯವಾಗಲ್ಲ ಎಂದು ಉತ್ತರಿಸಿದೆ. ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯು ಸದರಿ ಪ್ರಶ್ನೆಯು ಕರ್ನಾಟಕ ರಾಜ್ಯದಿಂದ ಗೋವಾಕ್ಕೆ ಕಳುಹಿಸಲಾಗುತ್ತಿರುವ ಮಾಂಸದ ಬಗ್ಗೆ ಇದ್ದು, ರಫ್ತಿಗೆ ಸಂಬಂಧಿಸಿರುವುದಿಲ್ಲ ಎಂದು ವರದಿ ನೀಡಿದೆ. ಗೋವಾಕ್ಕೆ ದನ ಮತ್ತು ಎಮ್ಮೆ ಮಾಂಸ ರಫ್ತು ಮಾಹಿತಿಯು ಶೂನ್ಯ ಎಂದು ಆರ್ಥಿಕ ಇಲಾಖೆಯು ವರದಿ ನೀಡಿದೆ ಎಂದು ತಿಳಿಸಿದರು.
ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ದನದ ಮಾಂಸ ಸಾಗಾಣಿಕೆ ಅಕ್ರಮವಾಗಲಿದೆ. ಎಲ್ಲಿಯೂ ಸಾಗಾಣಿಕೆ ಮಾಡುತ್ತಿಲ್ಲ, ಒಂದು ವೇಳೆ ಗೋವಾಕ್ಕೆ ನಮ್ಮ ರಾಜ್ಯದಿಂದ ದನದ ಮಾಂಸ ಸಾಗಣೆ ಮಾಡುತ್ತಿರುವುದು ಕಂಡು ಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ಚರ್ಮಗಂಟು ರೋಗಕ್ಕೆ ಈಗಾಗಲೇ 1 ಕೋಟಗೂ ಅಧಿಕ ಲಸಿಕೆ ಹಾಕಲಾಗಿದೆ. ಬೇರೆ ರಾಜ್ಯದಲ್ಲಿ ಪರಿಹಾರ ಕೊಡುತ್ತಿಲ್ಲ. ಆದರೆ, ನಾವು ಪರಿಹಾರ ಕೊಡುತ್ತಿದ್ದೇವೆ. ರೋಗ ನಿಯಂತ್ರಣಕ್ಕೆ ಸರ್ಕಾರ ಎಲ್ಲ ರೀತಿಯ ಪ್ರಯತ್ನ ನಡೆಸಿದೆ ಎಂದು ಹನುಮಂತ ನಿರಾಣಿ ಪ್ರಶ್ನೆಗೆ ಸಚಿವ ಚವ್ಹಾಣ್ ಉತ್ತರಿಸಿದರು.
ಕೋವಿಡ್ ಮೃತರಿಗೆ 446 ಕೋಟಿ ಪರಿಹಾರ ವಿತರಣೆ: ಕೋವಿಡ್ನಿಂದ ಮೃತಪಟ್ಟ ಕುಟುಂಬಗಳಿಗೆ ಈವರೆಗೂ 446 ಕೋಟಿ ಪರಿಹಾರ ವಿತರಣೆ ಮಾಡಲಾಗಿದ್ದು, ನೈಜತೆ ಆಧರಿಸಿ ಈಗಲೂ ಪರಿಹಾರ ನೀಡಿಕೆ ಮುಂದುವರೆಸಲಾಗಿದೆ. ರಾಜ್ಯ ಸರ್ಕಾರ 1 ಲಕ್ಷ ಕೇಂದ್ರದ 50 ಸಾವಿರ ಸೇರಿ ಒಟ್ಟು 1.5 ಲಕ್ಷ ರೂ.ಗಳನ್ನು ಮೃತರ ಕುಟುಂಬಕ್ಕೆ ನೀಡಲಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಯುಬಿ ವೆಂಕಟೇಶ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೋವಿಡ್ನಿಂದ ಮೃತ ಎಂದು ಹೆಲ್ತ್ ಬುಲೆಟಿನ್ನಲ್ಲಿಯೇ ಬಂದಿದ್ದರೆ ಅವರಿಗೆ ಪರಿಹಾರ ಒಂದು ಲಕ್ಷ ರಾಜ್ಯ ಸರ್ಕಾರದಿಂದ, ಐವತ್ತು ಸಾವಿರ ಕೇಂದ್ರದಿಂದ ಕೊಡಲಾಗಿದೆ. ಬುಲೆಟಿನ್ನಲ್ಲಿ ಹೆಸರು ಬಾರದೇ ಇದ್ದು ನಂತರ ಮೃತರ ಕುಟುಂಬದವರು ಅರ್ಜಿ ಸಲ್ಲಿಸಿದರೆ ಅದನ್ನು ಪರಿಗಣಿಸಲಾಗುತ್ತದೆ. ಆದರೆ, ನೈಜತೆ ಪರಿಶೀಲನೆಗೆ ಸಮಿತಿ ರಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಅಲ್ಲಿ ಕೋವಿಡ್ನಿಂದ ಸಾವು ಎಂದು ಖಚಿತವಾದರೆ ಮಾತ್ರ ಪರಿಹಾರ ಕೊಡಲಾಗುತ್ತದೆ. ಈವರೆಗೂ 446 ಕೋಟಿ ಪರಿಹಾರ ಕೊಡಲಾಗಿದೆ. ಈಗಲೂ ಪರಿಹಾರ ಕೊಡಲಾಗುತ್ತಿದೆ. ಮೃತರಾದವರ ಕುಟುಂಬದವರಲ್ಲದವರು ಪರಿಹಾರಕ್ಕೆ ಅರ್ಜಿ ಸಲ್ಲಿಕೆ ಮಾಡುತ್ತಿದ್ದಾರೆ. ಅದಕ್ಕೆಲ್ಲ ಕೊಡಲು ಸಾಧ್ಯವಿಲ್ಲ, ಇದು ಸರ್ಕಾರದ ಹಣ, ದುರುಪಯೋಗ ತಡೆಗೆ ಪರಿಹಾರಕ್ಕೆ ಅರ್ಜಿ ಸಲ್ಲಿಸುವವರ ಹೆಸರು ಮೃತ ವ್ಯಕ್ತಿಯ ಹೆಸರು ಇರುವ ಬಿಪಿಎಲ್ ಪಡಿತರ ಕಾರ್ಡಿನಲ್ಲಿರುವುದು ಕಡ್ಡಾಯ ಎಂದರು.
ಆದಷ್ಟು ಬೇಗ ಗ್ರಾಮಠಾಣಾ ಸರ್ವೆ ಕಾರ್ಯ: ಕೇಂದ್ರ ಸರ್ಕಾರ ರಾಜ್ಯದ ಗ್ರಾಮಗಳ ಜನವಸತಿ ಪ್ರದೇಶಗಳ ಆಸ್ತಿಗಳನ್ನು ಅಳತೆ ಮಾಡಿ ಹಕ್ಕು ದಾಖಲೆ ವಿತರಿಸುವ ಉದ್ದೇಶದಿಂದ ಸ್ವಮಿತ್ವ ಯೋಜನೆ ಜಾರಿಗೊಳಿಸಿದ್ದು, ಅದರಂತೆ ಗ್ರಾಮಠಾಣಾಗಳ ಸರ್ವೆ ಕಾರ್ಯ ನಡೆಸಿ ಪಿ.ಆರ್.ಕಾರ್ಡ್ ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ. ವಿಧಾಮ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ವೈ. ಎಂ ಸತೀಶ್ ಪರ ಡಿಎಸ್ ಅರುಣ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದ ಗ್ರಾಮ ಠಾಣಾ ಪ್ರದೇಶ ಗುರುತಿಸುವುದು ಬಹಳ ವಿಶಿಷ್ಟ. ಮೊದಲು ಬ್ರಿಟೀಷರ ಕಾಲದಲ್ಲಿ ಹಳೆ ಮೈಸೂರಿನಲ್ಲಿ, ಮುಂಬೈ ಪ್ರಾಂತ್ಯದಲ್ಲಿ, ಮದರಾಸು ಪ್ರಾಂತ್ಯದಲ್ಲಿ, ಹೈದರಾಬಾದ್ ಪ್ರಾಂತ್ಯ, ಕೊಡಗು ಪ್ರಾಂತ್ಯದಲ್ಲಿ ಸರ್ವೆ ಮಾಡಿದ್ದು ಶತಮಾನದ ಹಿಂದೆ ಮತ್ತೆ ರೀ ಸರ್ವೆ ಮಾಡಲಾಗಿದೆ.
ಈಗ ಶತಮಾನದ ನಂತರ ನಾವು ಗ್ರಾಮಠಾಣಾ ಸರ್ವೆ ಕಾರ್ಯ ನಡೆಸಲಾಗುತ್ತಿದೆ. ಸ್ವಮಿತ್ವ ಯೋಜನೆಯಡಿ ಸರ್ವೆ ಕಾರ್ಯ, ಹತ್ತು ಮನೆ ಇದ್ದರೂ ಗ್ರಾಮಠಾಣಾ ಮಾಡಲು ಆದೇಶಿಸಲಾಗಿದೆ. 3191 ಗ್ರಾಮಗಳಲ್ಲಿ ಡ್ರೋಣ್ ಸರ್ವೆ ಮಾಡಲಾಗಿದೆ. ಇದರಲ್ಲಿ 2467 ಗ್ರಾಮಗಳ 8.02 ಲಕ್ಷ ಕರಡು ಪಿ.ಆರ್ ಕಾರ್ಡ್ ವಿತರಿಸಲಾಗಿದೆ ಎಂದರು. ನೂರು ವರ್ಷದ ನಂತರ ಈಗ ಮತ್ತೆ ಸರ್ವೆ ಮಾಡಗುತ್ತಿದೆ. ಡ್ರೋಣ್ ಸರ್ವೆ ನಿಖರವಾಗಿ ದಾಖಲಾಗುತ್ತಿದೆ. ಆದಷ್ಟು ಬೇಗ ಎಲ್ಲ ಭಾಗದಲ್ಲಿಯೂ ಸರ್ವೆ ಕಾರ್ಯ ಮುಗಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ: ರಾಜ್ಯ ಒಕ್ಕಲಿಗರ ಸಂಘದ ವಿವಿ, ಕಿಷ್ಕಿಂದ ವಿವಿ ಸೇರಿ 6 ಖಾಸಗಿ ವಿವಿ ವಿಧೇಯಕಗಳು ಅಂಗೀಕಾರ