ಬೆಂಗಳೂರು: ಕಳೆದ 10 -12 ದಿನಗಳಿಂದ ತೀವ್ರ ಚಟುವಟಿಕೆ ಕೇಂದ್ರವಾಗಿದ್ದ ಕುಮಾರಕೃಪಾ ಅತಿಥಿ ಗೃಹ ಇಂದು ಬಿಕೋ ಎನ್ನುತ್ತಿದೆ.
ರಾಜ್ಯ ಮೈತ್ರಿ ಸರ್ಕಾರಕ್ಕೆ ಎದುರಾದ ಆತಂಕ ನಿವಾರಣೆಗೆ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಸಭೆ ನಡೆಸಲು ಕುಮಾರಕೃಪಾ ಅತಿಥಿ ಗೃಹವನ್ನು ಬಳಸಿಕೊಂಡಿದ್ದರು. ಆದರೆ ನಡೆಸಿದ ಪ್ರಯತ್ನಗಳಿಗೆ ಸುಪ್ರೀಂ ಕೋರ್ಟ್ ತೀರ್ಪು ತಣ್ಣೀರೆರಚಿದೆ. ಈ ಹಿನ್ನೆಲೆ ಮುಂದಿನ ತೀರ್ಮಾನ ಕೈಗೊಳ್ಳುವ ಸಲುವಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಬೇರೆಡೆಗಳಲ್ಲಿ ಸಭೆ ನಡೆಸಿದ್ದು, ಕುಮಾರಕೃಪಾ ಅತಿಥಿ ಗೃಹದತ್ತ ಯಾರೂ ಸುಳಿದಿಲ್ಲ.
ಮುಂದಿನ ಕಾರ್ಯತಂತ್ರ ರೂಪಿಸುವ ಸಲುವಾಗಿ ನಾಯಕರೆಲ್ಲ ಇಲ್ಲಿಂದ ತೆರಳಿದ್ದು, ನಾಯಕರೆಲ್ಲ ಯಾವಾಗ ಹಿಂದಿರುಗುತ್ತಾರೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಈ ಕಾರಣದಿಂದ ಇತ್ತ ಅವರನ್ನು ಸಂಪರ್ಕಿಸುವ ಸಲುವಾಗಿಯೂ ಯಾರೂ ಬರುತ್ತಿಲ್ಲ. ಬೆಳಗ್ಗೆ ಇಲ್ಲಿಂದ ತೆರಳಿದ್ದ ಕೆ.ಸಿ.ವೇಣುಗೋಪಾಲ್ ಹಾಗೂ ದಿನೇಶ್ ಗುಂಡೂರಾವ್ ಕೊನೆಗೂ 2.30ಕ್ಕೆ ಆಗಮಿಸಿ ಮಾಧ್ಯಮಗಳಿಗೆ ಮಾತನಾಡಿದ್ದು, ಇದಾದ ಬಳಿಕ ಬೇರೆ ಯಾವೊಬ್ಬ ನಾಯಕರು ಸುಳಿದಿಲ್ಲ. ಸಂಜೆಯ ಹೊತ್ತಿಗೆ ಎಲ್ಲ ನಾಯಕರು ಆಗಮಿಸಿ ಸಭೆ ನಡೆಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.