ಬೆಂಗಳೂರು : ಕೈಗಾರಿಕೆಗಳ ಸ್ಥಾಪನೆ ಮಾಡುವ ಸಂದರ್ಭದಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡದೆ ಉದ್ಯಮಿಗಳು ನಿಯಮ ಉಲ್ಲಂಘನೆ ಮಾಡಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಎಚ್ಚರಿಕೆ ನೀಡಿದ್ದಾರೆ.
ವಿಧಾನಸಭೆಯಲ್ಲಿ ಇಂದು ಪ್ರಶ್ನೋತ್ತರ ವೇಳೆ ಕಾಂಗ್ರೆಸ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೈಗಾರಿಕೆ ನೀತಿಯಲ್ಲೇ ಸ್ಥಳೀಯರಿಗೆ ಉದ್ಯೋಗ ಕೊಡಬೇಕೆಂಬ ನಿಯಮ ಇದೆ. ಒಂದು ವೇಳೆ ನಿಯಮ ಮೀರಿದರೆ ಕಾನೂನು ಕ್ರಮ ಜರುಗಿಸುತ್ತೇವೆ. ಇದರಲ್ಲಿ ಯಾವುದೇ ಮುಲಾಜಿಲ್ಲ ಎಂದರು.
ಮೈಸೂರಿನಲ್ಲಿ ಏಷ್ಯನ್ ಪೇಂಟ್‍ನವರು ಕಾರ್ಖಾನೆ ಸ್ಥಾಪನೆ ಮಾಡಿದ್ದರು. ಅಲ್ಲಿ ಸ್ಥಳೀಯರಿಗೆ ಉದ್ಯೋಗ ಕೊಡುವುದಿಲ್ಲ ಎಂದಾಗ ಸ್ವತಃ ನಾನೇ ಅಲ್ಲಿಗೆ ಭೇಟಿ ಕೊಟ್ಟು ಜಿಲ್ಲಾಧಿಕಾರಿ ಹಾಗೂ ಕೆಐಡಿಬಿ ಅಧಿಕಾರಿಗಳ ಜತೆ ಸಭೆ ಸೇರಿ 70 ಮಂದಿಗೆ ಉದ್ಯೋಗ ಕೊಡಿಸಿದ್ದೇನೆ ಎಂದು ಮಾಹಿತಿ ನೀಡಿದರು.
ಇದಕ್ಕೂ ಮುನ್ನ ಶಾಸಕರಾದ ಡಾ.ಯತೀಂದ್ರ, ಪ್ರಿಯಾಂಕ್ ಖರ್ಗೆ, ಪರಮೇಶ್ವರ್ ನಾಯಕ್ ಮತ್ತಿರರು ಮಾತನಾಡಿ, ಕೈಗಾರಿಕೆ ಸ್ಥಾಪಿಸಲು ರೈತರು ಜಮೀನು ಕೊಡುತ್ತಾರೆ. ಅವರಿಗೆ ಉದ್ಯೋಗ ಕೊಡುವುದಾಗಿ ನಾವು ಹೇಳುತ್ತೇವೆ.
ಆದರೆ, ಕೈಗಾರಿಕೆ ಮಾಲೀಕರು ಅವರಿಗೆ ವಯಸ್ಸಿನ ನಿಬಂಧನೆ, ಕೌಶಲ್ಯಾಭಿವೃದ್ಧಿ ಸಮಸ್ಯೆಗಳನ್ನೊಡ್ಡಿ ಉದ್ಯೋಗ ಕೊಡುವುದಿಲ್ಲ. ಇದಕ್ಕೆ ಒಂದು ನೀತಿ ಜಾರಿ ಮಾಡಿ ಎಂದು ಒತ್ತಾಯಿಸಿದರು.
ಇದಕ್ಕೆ ಸ್ಪಂದಿಸಿದ ಸಚಿವ ಶೆಟ್ಟರ್, ನಮ್ಮ ಕೈಗಾರಿಕೆ ನೀತಿಯಲ್ಲೇ ಅಳವಡಿಸಿಕೊಂಡಿದ್ದೇವೆ. ಒಂದು ವೇಳೆ ಯಾರಾದರೂ ನಿಯಮ ಉಲ್ಲಂಘಿಸಿದ ವಿಷಯ ಗಮನಕ್ಕೆ ಬಂದರೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಇದನ್ನೂ ಓದಿ: 'ಕುಟುಂಬ ವ್ಯಾಮೋಹಕ್ಕೆ ಬಲಿಯಾಗಬೇಡಿ, ಬ್ಯಾಂಡ್ ಸೆಟ್ ನಾಯಕರನ್ನು ದೂರವಿಡಿ'