ಬೆಂಗಳೂರು: ಕೊರೊನಾ ಭೀತಿಯಿಂದ ರಾಜ್ಯ ಸರ್ಕಾರ ಈಗಾಗಲೇ ಎಲ್ಕೆಜಿಯಿಂದ ಐದನೇ ತರಗತಿವರೆಗಿನ ಮಕ್ಕಳಿಗೆ ಶಾಲೆಗಳನ್ನು ನಡೆಸಬಾರದು ಎಂದು ಆದೇಶಿಸಿದೆ. ಇದನ್ನು ಮೀರಿಯೂ ಶಾಲೆ ತೆರೆದು ತರಗತಿ ನಡೆಸಿದ ಖಾಸಗಿ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಎಚ್ಚರಿಕೆ ರವಾನಿಸಿದ್ದಾರೆ.
ದ್ವಿತೀಯ ಪಿಯುಸಿ ಕನ್ನಡ, ಅಕೌಂಟ್ಸ್, ಗಣಿತ ಪರೀಕ್ಷೆ ಹಿನ್ನೆಲೆ ಆನಂದ್ ರಾವ್ ಸರ್ಕಲ್ ನಲ್ಲಿರುವ ಎಸ್ಜೆಆರ್ಸಿ ಕಾಲೇಜಿನ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಅವರು, ಪರೀಕ್ಷೆ ಇವತ್ತು ಸುಸೂತ್ರವಾಗಿ ನಡೀತಾ ಇದೆ. 4,62, 350 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಬೆಂಗಳೂರು ನಗರ ಜಿಲ್ಲೆ ಹಾಗೂ ಗ್ರಾಮಾಂತರ ದಲ್ಲಿ 1 ರಿಂದ 5ನೇ ತರಗತಿಗಳಿಗೆ ರಜೆ ಘೋಷಿಸಿದ್ದೇವೆ. ಮೊನ್ನೆ ಯುಕೆಜಿವರೆಗೆ ರಜೆ ಘೋಷಿಸಿದ್ದೆವು. ಆರೋಗ್ಯ ಇಲಾಖೆ ಕೊಟ್ಟಿರುವ ಸಲಹೆ ಮೇರೆಗೆ ನಾವು ರಜಾ ಕೊಟ್ಟಿದ್ದೇವೆ. ಮೂನ್ಸೂಚನೆ ಕೊಟ್ಟಿದ್ರು ಶಾಲೆ ನಡೆಸಿರೋದು ಗಮನಕ್ಕೆ ಬಂದಿದೆ. ಪೋಷಕರು ನಂಗೆ ವಾಟ್ಸ್ಯಾಪ್ ಮೂಲಕ ದೂರು ನೀಡಿದ್ದಾರೆ ಎಂದರು.
ಖಾಸಗಿ ಶಾಲೆಯರು ಬರುವಂತೆ ಒತ್ತಡ ಹಾಕಿ ತರಗತಿ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಬೆಂಗಳೂರು ನಗರ ಜಿಲ್ಲೆ, ಗ್ರಾಮಾಂತರ ಜಿಲ್ಲೆಯ ಎಲ್ಲಾ ಶಾಲೆಗಳು ಇದನ್ನು ಅನುಷ್ಠಾನಕ್ಕೆ ತರಬೇಕು. ಮಕ್ಕಳ ಆರೋಗ್ಯಕ್ಕಿಂತ ಪ್ರತಿಷ್ಠೆ ಮುಖ್ಯ ಆಗಬಾರದು ಎಂದು ಸಚಿವರು ಹೇಳಿದರು.