ಬೆಂಗಳೂರು: ನಗರದ ವ್ಯಾಪ್ತಿಯಲ್ಲಿರುವ ರಸ್ತೆ ಗುಂಡಿಗಳನ್ನು ಮಾರ್ಚ್ 31ರೊಳಗೆ ಮುಚ್ಚದಿದ್ದಲ್ಲಿ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ ಎಂದು ಹೈಕೋರ್ಟ್ ಎಚ್ಚರಿಕೆ ನೀಡಿದೆ.
ನಗರದಲ್ಲಿನ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಸರ್ಕಾರ ಮತ್ತು ಬಿಬಿಎಂಪಿಗೆ ನಿರ್ದೇಶಿಸಬೇಕು ಎಂದು ಕೋರಿ ವಿವಿಧ ಎನ್‌ಜಿಒಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ, ಬಿಬಿಎಂಪಿಗೆ ಹಲವು ನಿರ್ದೇಶನಗಳನ್ನು ನೀಡಿದೆ.
ಗುರುವಾರ ವಿಚಾರಣೆ ನಡೆದ ವೇಳೆ ಬಿಬಿಎಂಪಿ ಪರ ವಕೀಲರು ಸರ್ಕಾರಕ್ಕೆ ಪ್ರಮಾಣ ಪತ್ರ ಸಲ್ಲಿಸಿ, ನಗರದಲ್ಲಿ 470 ಕಿ.ಮೀ ರಸ್ತೆಯಲ್ಲಿದ್ದ ರಸ್ತೆ ಗುಂಡಿಗಳನ್ನು ಮುಚ್ಚಿದ್ದೇವೆ. ಉಳಿದಂತೆ ವಿವಿಧೆಡೆ 17 ಕಿಮೀ ರಸ್ತೆಯಲ್ಲಿ ರಸ್ತೆ ಗುಂಡಿಗಳಿವೆ. ಇಲ್ಲೆಲ್ಲಾ ಬಿಡಬ್ಲೂಎಸ್‌ಎಸ್‌ಬಿ, ಬೆಸ್ಕಾಂ, ಕೆಪಿಟಿಸಿಎಲ್ ಮತ್ತಿತರ ಸಂಸ್ಥೆಗಳು ಕಾಮಗಾರಿ ನಡೆಸುತ್ತಿದ್ದು, ರಸ್ತೆ ಗುಂಡಿಗಳನ್ನು ಮುಚ್ಚಲು ಸಾಧ್ಯವಾಗಿಲ್ಲ. ರಸ್ತೆ ಗುಂಡಿಯಿಂದಾಗಿ ಸಾವು-ನೋವಿಗೆ ಒಳಗಾದವರಿಗೆ ಪರಿಹಾರ ನೀಡಲು ಎಲ್ಲ ಕ್ರಮ ಕೈಗೊಂಡಿದ್ದೇವೆ. ರಸ್ತೆ ಗುಂಡಿಗಳ ಕುರಿತು ದೂರು ನೀಡಲು ಸಾರ್ವಜನಿಕರಿಗೆ ಸಹಾಯ್ ಆ್ಯಪ್ ನೀಡಿದ್ದು, ಕಳೆದ ನಾಲ್ಕು ದಿನಗಳಲ್ಲಿ 17 ದೂರುಗಳನ್ನು ಸ್ವೀಕರಿಸಿದ್ದೇವೆ ಎಂದು ವಿವರಿಸಿದರು.
ಅಸಮರ್ಪಕ ವರದಿ ಹಾಗೂ ರಸ್ತೆ ಗುಂಡಿ ಮುಚ್ಚಲು ಕೋರ್ಟ್ ನೀಡಿರುವ ಆದೇಶಗಳನ್ನು ಸರಿಯಾಗಿ ಪಾಲಿಸದ ಬಿಬಿಎಂಪಿ ವಿರುದ್ಧ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು. ಉತ್ತಮ ರಸ್ತೆಗಳನ್ನು ಹೊಂದುವುದು ಪ್ರಜೆಗಳ ಮೂಲಭೂತ ಹಕ್ಕು, ಜನರೇನೂ ಬಿಬಿಎಂಪಿ ದಾಕ್ಷಿಣ್ಯದಲ್ಲಿ ಬದುಕಬೇಕಿಲ್ಲ. ಆದ್ದರಿಂದ, ಬಾಕಿ ಇರುವ ಗುಂಡಿಗಳನ್ನು ಶೀಘ್ರವಾಗಿ ಮುಚ್ಚಬೇಕು. ಈ ಕುರಿತ ಅನುಪಾಲನಾ ವರದಿಯನ್ನು ಮುಂದಿನ ವಿಚಾರಣೆ ವೇಳೆ ಸಲ್ಲಿಸಬೇಕು ಎಂದು ತಾಕೀತು ಮಾಡಿತು.
ರಸ್ತೆ ಗುಂಡಿ ಮುಚ್ಚಿದ ಕಾಮಗಾರಿಯ ಗುಣಮಟ್ಟ ಪರಿಶೀಲಿಸಲು ಎರಡು ವಾರಗಳಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಅಧಿಕಾರಿಗಳನ್ನು ನೇಮಿಸಿಕೊಳ್ಳಬೇಕು. ರಸ್ತೆ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಅಂಧರಿಗೆ ಅನುಕೂಲವಾಗುವಂತೆ ಶಬ್ಧ ಮಾಡುವಂತಹ ಉಪಕರಣಗಳನ್ನು ಅಳವಡಿಸಬೇಕು. ರಸ್ತೆ ಕಾಮಗಾರಿ ಮಾಡುವವರಿಗೆ ಕಾಲಮಿತಿ ನಿಗದಿಪಡಿಸಬೇಕು. ದೂರು ಸಲ್ಲಿಸಲು ಮತ್ತು ಪರಿಹಾರ ಕೋರಲು ಇರುವ ಮಾಹಿತಿಗಳನ್ನು ಸಾರ್ವಜನಿಕರಿಗೆ ತಲುಪಿಸಲು ಅಗತ್ಯ ಪ್ರಚಾರ ಕಾರ್ಯ ಕೈಗೊಳ್ಳಬೇಕು ಎಂದು ಹೈಕೋರ್ಟ್ ಆದೇಶಿಸಿತು.
ಏತನ್ಮಧ್ಯೆ, ರಸ್ತೆ ಗುಂಡಿಗಳಿಂದಾಗಿರುವ ಹಾನಿಗಳಿಗೆ ಪರಿಹಾರ ನೀಡಬೇಕೆಂದು ನೀಡಲಾಗಿದ್ದ ಆದೇಶ ಪಾಲನೆ ಮಾಡದ ಪಾಲಿಕೆ ಆಯುಕ್ತರು, ಮೇಯರ್, ಉಪ ಮೇಯರ್, ವಿವಿಧ ಸ್ಥಾಯಿ ಸಮಿತಿಗಳ ಮುಖ್ಯಸ್ಥರ ಜೊತೆ ಸಭೆ ನಡೆಸಿದ ವಿಚಾರವನ್ನು ಸ್ಪಷ್ಟಪಡಿಸುವಂತೆ ಮೇಯರ್, ಉಪಮೇಯರ್, ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ನಾಯಕರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿತು.