ಬೆಂಗಳೂರು: ಕಾಂಗ್ರೆಸ್ ಹಾಗೂ ಜೆಡಿಎಸ್ ನಿಂದ ಒಟ್ಟು 13 ಶಾಸಕರು ರಾಜೀನಾಮೆ ನೀಡಿದ್ದಾರೆ. ಇಂದು ಈ ಶಾಸಕರ ರಾಜೀನಾಮೆ ಪತ್ರಗಳನ್ನು ಸ್ಪೀಕರ್ ರಮೇಶ್ ಕುಮಾರ್ ಪರಿಶೀಲಿಸಲಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪೀಕರ್ ದೊಮ್ಮಲೂರು ನಿವಾಸದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಸಂವಿಧಾನ ಹಾಗೂ ಜನರು ಏನನ್ನು ನಿರೀಕ್ಷೆ ಮಾಡುತ್ತಾರೋ ಅದಕ್ಕೆ ಲೋಪವಾಗದಂತೆ ಜವಾಬ್ದಾರಿ ಮತ್ತು ಗೌರವಯುತವಾಗಿ ನಡೆದುಕೊಳ್ಳುತ್ತೇನೆ. ಸದ್ಯದ ರಾಜಕೀಯ ಬೆಳವಣಿಗೆಗಳಿಗೂ ನನಗೂ ಸಂಬಂಧವಿಲ್ಲ. ನನ್ನ ಸ್ಥಾನದಲ್ಲಿ ಹೇಗೆ ವರ್ತಿಸಬೇಕೋ ಅಷ್ಟಕ್ಕೆ ನಾನು ಸೀಮಿತವಾಗಿರುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನೂ ಕೆಲವು ಶಾಸಕರು ರಾಜೀನಾಮೆ ನೀಡುವ ಸಲುವಾಗಿ ಸ್ಪೀಕರ್ ಭೇಟಿಗೆ ಕಾಲಾವಕಾಶ ಕೇಳಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ರಮೇಶ್ ಕುಮಾರ್, ಇದುವರೆಗೂ ಯಾರೂ ನನ್ನನ್ನು ಭೇಟಿ ಮಾಡಲು ಸಮಯ ಕೇಳಿಲ್ಲ. ಒಂದು ವೇಳೆ ಯಾರಾದರು ನನ್ನ ಭೇಟಿಗೆ ಅವಕಾಶ ಕೇಳಿದ್ರೆ ಕಚೇರಿಯಲ್ಲೇ ಇರುತ್ತೇನೆ ಎಂದರು.
ಸದ್ಯದ ರಾಜಕೀಯವನ್ನು ಕೊಳಚೆ ಪ್ರದೇಶದ ವಾಸಕ್ಕೆ ಹೋಲಿಸಿದ ವಿಧಾನಸಭಾಧ್ಯಕ್ಷರು, ಇತ್ತೀಚಿನ ಬೆಳವಣಿಗೆ ಬಗ್ಗೆ ನನಗೇನು ಬೆಸರವಿಲ್ಲ. ಕೊಳಚೆ ಪ್ರದೇಶದಲ್ಲಿ ವಾಸ ಮಾಡೋರಿಗೆ ದುರ್ವಾಸನೆ ಬರುತ್ತಾ ಎಂದರೆ ಹೇಗೆ. ನಾನು ಇರೋದೆ ಕೊಳಚೆಯಲ್ಲಿ, ಇಲ್ಲಿ ಸುಗಂಧದ ಪರಿಮಳ ನಿರೀಕ್ಷಿಸಲು ಸಾಧ್ಯವಿಲ್ಲವೆಂದು ಪರೋಕ್ಷವಾಗಿ ಪ್ರಸ್ತುತ ರಾಜಕೀಯ ಬೆಳವಣಿಗೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.