ಬೆಂಗಳೂರು: ಹೆಂಡತಿ ಜೊತೆ ಮಾತನಾಡಬೇಡ ಅಂದಿದಕ್ಕೆ ಮನೆಗೆ ಬಂದು ಚಾಕುವಿನಿಂದ ಹಲ್ಲೆ ಮಾಡಿದ್ದ ಪ್ರಮುಖ ಆರೋಪಿ ಸೇರಿ ನಾಲ್ವರನ್ನು ಸಿ.ಕೆ.ಅಚ್ಚುಕಟ್ಟು ಪೊಲೀಸರು ಸೆರೆ ಹಿಡಿದಿದ್ದಾರೆ.
ಹಲ್ಲೆಗೊಳಗಾದ ನಾಗಮಂಗಲ ಮೂಲದ ನರಸಿಂಹಶೆಟ್ಟಿ ನೀಡಿದ ದೂರಿನ ಮೇರೆಗೆ ಬ್ಯಾಟರಾಯನಪುರ ನಿವಾಸಿ ಚಂದ್ರು ಹಾಗೂ ಆತನ ಸಹಚರರಾದ ಪ್ರಮೋದ್, ಸಂತೋಷ್, ಕಿರಣ್ ಎಂಬುವವರನ್ನು ಬಂಧಿಸಿ ಪೊಲೀಸರು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.
ದನಕರುಗಳ ಮಾರಾಟ ದಲ್ಲಾಳಿಯಾಗಿರುವ ನರಸಿಂಹಶೆಟ್ಟಿ ಪತ್ನಿ ವರಲಕ್ಷ್ಮೀ ಜೊತೆ ಕತ್ರಿಗುಪ್ಪೆಯಲ್ಲಿ ವಾಸವಾಗಿದ್ದರು. ಪತ್ನಿ ಐದಾರು ವರ್ಷಗಳಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಳು. ಆರೋಪಿ ಚಂದ್ರು ಅಕ್ಕನ ಮೂಲಕ ವರಲಕ್ಷ್ಮೀ ಪರಿಚಯವಾಗಿತ್ತು. ಕ್ರಮೇಣ ಸ್ನೇಹಿತರಾಗಿ ಆತ್ಮೀಯತೆ ಹೆಚ್ಚಾಗುತ್ತಿದ್ದಂತೆ ಚಂದ್ರುಗೆ ಬೈಕ್ ಕೊಡಿಸಿದ್ದಳು. ಅಲ್ಲದೆ ಹಣಕಾಸಿನ ಸಹಾಯ ಕೂಡ ಮಾಡಿದ್ದಳು. ಇಬ್ಬರು ಸಹ ಪೋನ್ ಮೂಲಕ ಪ್ರತಿದಿನ ಮಾತನಾಡುತ್ತಿದ್ದಂತೆ.
ಇದನ್ನೂ ಓದಿ: ತುಮಕೂರಲ್ಲಿ ಬುದ್ಧಿಮಾಂದ್ಯೆ ಮೇಲೆ ಅತ್ಯಾಚಾರ ಕೇಸ್: ಎಎಸ್ಐಗೆ 20 ವರ್ಷ ಜೈಲು ಶಿಕ್ಷೆ
ಈ ವಿಚಾರ ನರಸಿಂಹಶೆಟ್ಟಿಗೆ ಗೊತ್ತಾಗಿ ತನ್ನ ಹೆಂಡತಿ ಜೊತೆ ಮಾತನಾಡಬೇಡ ಎಂದು ಗದರಿಸಿದ್ದಂತೆ. ಪತ್ನಿ ಕೊಡಿಸಿದ್ದ ಬೈಕ್ ಹಾಗೂ ಹಣ ಕೊಡುವಂತೆ ಗದರಿಸಿದ್ದಂತೆ. ಇದರಿಂದ ಅಸಮಾಧಾನಗೊಂಡ ಚಂದ್ರು, ತನ್ನ ಸಹಚರರೊಂದಿಗೆ ಗ್ಯಾಂಗ್ ಕಟ್ಟಿಕೊಂಡು ಭಾನುವಾರ ರಾತ್ರಿ ಮನೆಗೆ ನುಗ್ಗಿ ಚಾಕುವಿನಿಂದ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದರು. ಘಟನೆ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ