ಬೆಂಗಳೂರು: ಶಾಲೆಗಳು ಆರಂಭವಾಗಿ ತಿಂಗಳು ಕಳೆಯುತ್ತಾ ಬಂತು. ಆರಂಭದಲ್ಲೇ ನಗರದಲ್ಲಿ ಮಕ್ಕಳಿಗೆ ಖಾಸಗಿ ಶಾಲೆಗಳು ಟಾರ್ಚರ್ ಕೊಡುತ್ತಿರುವ ಗಂಭೀರ ಆಪಾದನೆ ಕೇಳಿ ಬಂದಿದೆ.
ಆರನೇ ತರಗತಿ ಓದುತ್ತಿದ್ದ ವಿದ್ಯಾರ್ಥಿಯ ಮೇಲೆ ಶಿಕ್ಷಕರೊಬ್ಬರು ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ನೋಟ್ ಬುಕ್ ತಂದಿಲ್ಲ ಎಂದಿದ್ದಕ್ಕೆ ಬೆಂಗಳೂರಿನ ವಿಜಯ ನಗರದ ಶಾಲೆಯೊಂದರಲ್ಲಿ ವಿದ್ಯಾರ್ಥಿಗೆ ಶಿಕ್ಷಕ ಹಲ್ಲೆ ನಡೆಸಿದ್ದಾಗಿ ಪೋಷಕರು ಆರೋಪಿಸಿದ್ದಾರೆ.
ವಿದ್ಯಾರ್ಥಿಯ ಕಿವಿ ಮತ್ತು ಕಣ್ಣಿಗೆ ಬಲವಾದ ಏಟು ಬಿದ್ದ ಹಿನ್ನೆಲೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಇತ್ತ ಘಟನೆ ಬಗ್ಗೆ ಪ್ರಶ್ನೆ ಮಾಡಿದರೆ ಪ್ರಾಂಶುಪಾಲರು ಸರಿಯಾದ ಉತ್ತರ ನೀಡಿಲ್ಲ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಣಿತ ನೋಟ್ಸ್ ತಂದಿಲ್ಲದಕ್ಕೆ ಕಪಾಳಮೋಕ್ಷ: ಗಣಿತ ನೋಟ್ಸ್ ತಂದಿಲ್ಲ ಎಂದಿದ್ದಕ್ಕೆ ಶಿಕ್ಷಕ ಮಾದೇಶ್ ವಿದ್ಯಾರ್ಥಿ ತನ್ಮಯ್ ಕಪಾಳಕ್ಕೆ ಬಾರಿಸಿದ್ದಾರೆ ಎನ್ನಲಾಗಿದೆ. ಪರಿಣಾಮ ಆತನಿಗೆ ಕಿವಿ ನೋವಾಗಿದ್ದು, ಕಣ್ಣಿನ ಭಾಗದಲ್ಲಿ ರಕ್ತ ಹೆಪ್ಪುಗಟ್ಟಿದೆ. ಹೀಗಾಗಿ ತನ್ಮಯ್ ಕಣ್ಣಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ಶಿಕ್ಷಕನಿಗೆ ಕೊರೊನಾ: ಬ್ಲೂಬೆಲ್ ಶಾಲಾ ಆಡಳಿತ ಮಂಡಳಿ ಈ ಘಟನೆಗೆ ಕ್ಯಾರೇ ಎನ್ನುತ್ತಿಲ್ಲವಂತೆ. ಮಗನ ಮೇಲೆ ಹಲ್ಲೆ ಪ್ರಶ್ನಿಸಿದ ತಂದೆಗೆ ಪ್ರಾಂಶುಪಾಲರು ಉಡಾಫೆ ಮಾತುಗಳನ್ನಾಡಿದ್ದಾರೆ. ಹೊಡೆದಿರುವ ಶಿಕ್ಷಕನಿಗೆ ಕೊರೊನಾ ತಗುಲಿದೆ ಹೀಗಾಗಿ ನಾನು ಏನು ಮಾಡಲಿ ಎಂದು ಪ್ರಾಂಶುಪಾಲರು ಹೇಳಿದ್ದಾಗಿ ವಿದ್ಯಾರ್ಥಿಯ ತಾಯಿ ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಭ್ರಷ್ಟಾಚಾರ ಪ್ರಕರಣ: ಬೆಂಗಳೂರು ಡಿಸಿಯಾಗಿದ್ದ ಮಂಜುನಾಥ್ ಅರೆಸ್ಟ್