ಬೆಂಗಳೂರು: ನಗ,ನಾಣ್ಯ ದೋಚುವ ಕಳ್ಳರ ನಡುವೆ ಇಲ್ಲೊಬ್ಬ ಖದೀಮ ಎಳನೀರು ಕದ್ದು ಪೊಲೀಸರ ಅತಿಥಿಯಾಗಿದ್ದಾನೆ. ನಗರದಲ್ಲಿ ಎಳನೀರು ಕಳ್ಳತನ ಮಾಡುತ್ತಾ ತಲೆನೋವಾಗಿ ಪರಿಣಮಿಸಿದ್ದ ತಮಿಳುನಾಡು ಮೂಲದ ಮೋಹನ್ ಎಂಬಾತನನ್ನು ಗಿರಿನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಮಡಿವಾಳದಲ್ಲಿ ವಾಸವಿದ್ದ ಮೋಹನ್ ಈ ಹಿಂದೆ ಎಳನೀರು ವ್ಯಾಪಾರ ಮಾಡಿಕೊಂಡಿದ್ದ. ಫ್ರೀ ಟೈಂನಲ್ಲಿ ಆನ್‌ಲೈನ್ ರಮ್ಮಿ ಆಡುತ್ತಾ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದ. ನಂತರ ಎಳನೀರು ಮಾರುವುದನ್ನು ನಿಲ್ಲಿಸಿ, ಬಾಡಿಗೆ ಕಾರು ಪಡೆದು ಓಡಿಸುವ ಕೆಲಸ ಮಾಡಿಕೊಂಡಿದ್ದ. ಸಾಲ ಜಾಸ್ತಿ ಆಗಿದ್ದರಿಂದ ಎಳನೀರು ಕಳ್ಳತನಕ್ಕೆ ಸಂಚು ರೂಪಿಸಿದ್ದ ಆರೋಪಿ ಪ್ರತಿದಿನ ಬಾಡಿಗೆ ಕಾರನ್ನು ಬಳಸಿಕೊಂಡು ಕಳ್ಳತನ ಮಾಡುತ್ತಿದ್ದನು.
ರಸ್ತೆ ಬದಿಯಲ್ಲಿರುವ ಅಂಗಡಿಗಳಿಂದ ರಾತ್ರಿ ವೇಳೆ ಎಳನೀರು ಕಳ್ಳತನ ಮಾಡಿ ಮತ್ತೊಬ್ಬ ವ್ಯಾಪಾರಿಗೆ ಮದ್ದೂರು ಎಳನೀರು ಎಂದು ಮಾರಾಟ ಮಾಡುತ್ತಿದ್ದ. ಮೂರು ತಿಂಗಳಿನಿಂದ ಪ್ರತಿನಿತ್ಯ ನೂರರಿಂದ ನೂರೈವತ್ತು ಎಳನೀರು ಕದ್ದು ಮಾರಾಟ ಮಾಡುತ್ತಿದ್ದ ಆರೋಪಿ, ಗಿರಿನಗರದ ಮಂಕುತಿಮ್ಮ ಪಾರ್ಕ್ ಬಳಿ ಇತ್ತೀಚಿಗೆ ರಾಜಣ್ಣ ಎಂಬವರ ಅಂಗಡಿಯಿಂದ ಸುಮಾರು ಒಂದು ಸಾವಿರದಷ್ಟು ಎಳನೀರು ಕಳ್ಳತನ ಮಾಡಿದ್ದ ಬಗ್ಗೆ ದೂರು ದಾಖಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ ಪೊಲೀಸರು, ಆರೋಪಿ ಮೋಹನ್ನನ್ನು ಬಂಧಿಸಿದ್ದಾರೆ. ಬಂಧಿತನಿಂದ ಎಳನೀರು ಸೇರಿದಂತೆ ಎಂಟು ಲಕ್ಷ ರೂ. ಮೌಲ್ಯದ ಒಂದು ಕಾರು, ರಾಯಲ್ ಎನ್ ಫೀಲ್ಡ್ ಬೈಕ್ ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ: ಹಣಕಾಸಿನ ವಿಚಾರ: ವಿಜಯಪುರದಲ್ಲಿ ವ್ಯಕ್ತಿಯ ಮೇಲೆ ಗುಂಡು ಹಾರಿಸಿದ್ದ 12 ಜನ ಆರೋಪಿಗಳ ಬಂಧನ