ಬೆಂಗಳೂರು: ಆಸ್ತಿ ವಿಚಾರಕ್ಕೆ ಸ್ನೇಹಿತನ ಮೈಮೇಲೆ ಕಾರು ಹತ್ತಿಸಿ ಹತ್ಯೆಗೆ ಯತ್ನಿಸಿರುವ ಘಟನೆ ಜೆ.ಸಿ.ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಾರ್ಚ್ 21ರ ಮುಂಜಾನೆ 5.30 ರಿಂದ 6 ಗಂಟೆಯ ಸುಮಾರಿಗೆ ಜಯಮಹಲ್ ಬಳಿ ಗಗನ್ ಶರ್ಮಾ ಎಂಬಾತನಿಗೆ ಥಳಿಸಿ, ಆತನ ಮೇಲೆ ಕಾರು ಹತ್ತಿಸಿದ್ದ ಸುನಿಲ್, ಅರುಣ್, ಕೃಷ್ಣ ಎಂಬ ಆರೋಪಿಗಳು ಹತ್ಯೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.
ವಿವರ: ಹೈಗ್ರೌಂಡ್ಸ್ ಠಾಣೆಯಲ್ಲಿ ರೌಡಿಶೀಟರ್ ಆಗಿರುವ ಗಗನ್ ಶರ್ಮಾ, ಮತ್ತು ಆರೋಪಿಗಳಾದ ಸುನೀಲ್ ಕುಮಾರ್, ಅರುಣ್, ಕೃಷ್ಣ ಸ್ನೇಹಿತರು. ಆಸ್ತಿ ವಿಚಾರಕ್ಕಾಗಿ ನಾಲ್ವರ ನಡುವೆ ಮನಸ್ತಾಪ ಉಂಟಾಗಿತ್ತು. ಮಾರ್ಚ್ 20ರಂದು ಮಾತುಕತೆಗೆಂದು ಗಗನ್ ಶರ್ಮಾನನ್ನು ಫ್ರೇಜರ್ಟೌನ್ ಬಳಿ ಕರೆಸಿಕೊಂಡಿದ್ದ ಸುನೀಲ್ ಅಲ್ಲಿಂದ ಆತನನ್ನು ಕಾರಿನಲ್ಲಿ ಕೂರಿಸಿಕೊಂಡು ಸಿಟಿ ಸುತ್ತಾಡಿದ್ದ. ಮಾರ್ಚ್ 21ರ ಬೆಳಗ್ಗೆ ಜಯಮಹಲ್ ರಸ್ತೆ ಬಳಿ ಬಂದು ಕಾರು ನಿಲ್ಲಿಸಿ ಗಲಾಟೆ ಆರಂಭಿಸಿದ್ದ ಬಳಿಕ ಗಗನ್ ಮೇಲೆ ಸುನಿಲ್, ಅರುಣ್ ಹಾಗೂ ಕೃಷ್ಣ ಹಲ್ಲೆ ಮಾಡಿದ್ದರು. ನಂತರ ಆತನನ್ನು ಕೆಳಗೆ ತಳ್ಳಿ ಮೂರ್ನಾಲ್ಕು ಬಾರಿ ಕಾರು ಹತ್ತಿಸಿ ಪರಾರಿಯಾಗಿದ್ದರು. ಘಟನೆಯಲ್ಲಿ ಗಗನ್ ಕಾಲು, ಪಕ್ಕೆಲುಬು ಮುರಿತವಾಗಿದ್ದು, ಕಣ್ಣು, ಮುಖ, ಕೈಗಳಿಗೆ ಗಂಭೀರ ಗಾಯಗಳಾಗಿವೆ. ನಂತರ, ಜೆ.ಸಿ.ನಗರ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದು, ಪೊಲೀಸರು ಗಾಯಾಳು ಗಗನ್ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಸಂಬಂಧ ಜೆ.ಸಿ.ನಗರ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದ್ದು ಆರೋಪಿ ಸುನೀಲ್‌ನನ್ನು ಬಂಧಿಸಿ ಉಳಿದಿಬ್ಬರಿಗೆ ಶೋಧ ನಡೆಸುತ್ತಿದ್ದಾರೆ.
ದುಬಾರಿ ಫೋನ್ ಕದ್ದು ಸಾಗಾಟ, ಬಂಧನ: ಬೆಂಗಳೂರಿನ ಮತ್ತೊಂದು ಪ್ರಕರಣದಲ್ಲಿ ಸ್ಮಾರ್ಟ್ಫೋನ್ನಲ್ಲಿ ಮಾತನಾಡಿಕೊಂಡು ಓಡಾಡುವವರನ್ನೇ ಗುರಿಯಾಗಿಸಿ ರಾತ್ರಿ ವೇಳೆ ಸಕ್ರಿಯವಾಗಿ ಐಪೋನ್ ಸೇರಿದಂತೆ ವಿವಿಧ ಕಂಪನಿಗಳ ಪೋನ್ ಸುಲಿಗೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ವಿವೇಕನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಸುಹೇಲ್, ಸಾಹೀಬ್ ಹಾಗೂ ಗೋರಿಪಾಳ್ಯದ ಮೊಹಮ್ಮದ್ ಸಕೈನ್ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಒಟ್ಟು 40 ಲಕ್ಷ ರೂ ಮೌಲ್ಯದ ಮೊಬೈಲ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳು ನಗರದಲ್ಲಿ ಸಣ್ಣಪುಟ್ಟ ಕೆಲಸ ಸೇರಿ ಗುಜರಿ ಕೆಲಸ ಮಾಡಿಕೊಂಡಿದ್ದರು. ಹಣದ ವ್ಯಾಮೋಹಕ್ಕಾಗಿ ತಮ್ಮ ಕೆಲಸ ಮುಗಿದ ನಂತರ ರಾತ್ರಿ ವೇಳೆ ತಾವು ಕದ್ದಿದ್ದ ಬೈಕ್ಗಳಲ್ಲಿ ನಗರದೆಲ್ಲೆಡೆ ಸುತ್ತಾಡುತ್ತಿದ್ದರು. ವಸತಿ ಪ್ರದೇಶಗಳಲ್ಲಿ ಮೊಬೈಲ್ನಲ್ಲಿ ಮಾತನಾಡಿಕೊಂಡು ಓಡಾಡುವರನ್ನು ಗುರಿಯಾಗಿಸಿ ಕ್ಷಣಾರ್ಧದಲ್ಲಿ ಅವರ ಮೊಬೈಲ್ ಕಸಿದು ಸ್ಥಳದಿಂದ ಪರಾರಿಯಾಗುತ್ತಿದ್ದರು. ಅಲ್ಲದೇ ಕದ್ದಿರುವ ಸಾವಿರಾರು ರೂಪಾಯಿ ಬೆಲೆಬಾಳುವ ಮೊಬೈಲ್ ಫೋನ್ಗಳನ್ನು ಕೊರಿಯರ್ ಮೂಲಕ ಹೈದರಾಬಾದ್ನ ಜಗದೀಶಪುರ ಮಾರ್ಕೆಟ್ನ ಪರಿಚಯಸ್ಥರಿಗೆ ಕಳುಹಿಸುತ್ತಿದ್ದರು. ಫೋನ್ಗಳ ಲೊಕೇಷನ್ ಪತ್ತೆಯಾಗದಂತೆ ಅದರ ಮದರ್ ಬೋರ್ಡ್ ಪ್ರತ್ಯೇಕಗೋಳಿಸುತ್ತಿದ್ದರು. ಈ ಮೂಲಕ ಲಕ್ಷಾಂತರ ರೂ ಹಣವನ್ನು ಸಂಪಾದನೆ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಐಫೋನ್ ಸೇರಿ ದುಬಾರಿ ಫೋನ್ಗಳನ್ನು ಕದ್ದು ತೆಲಂಗಾಣಕ್ಕೆ ಸಾಗಣೆ: ಮೂವರ ಬಂಧನ, 40 ಲಕ್ಷ ಮೌಲ್ಯದ ಮೊಬೈಲ್ ವಶ