ಬೆಂಗಳೂರು: ನಗರದಲ್ಲಿ ಮತ್ತೊಂದೆಡೆ ವಿಶೇಷ ತನಿಖಾ ತಂಡ ಭರ್ಜರಿ ಕಾರ್ಯಾಚರಣೆ ನಡೆಸಿದೆ. ಖಾಸಗಿ ಕೋರಿಯರ್ ಕಂಪನಿಯೊಂದರ ಹೆಸರಲ್ಲಿ ಕರೆ ಮಾಡಿ 'ನಿಮ್ಮ ಕೊರಿಯರ್'ನಲ್ಲಿ ಅಕ್ರಮ ವಸ್ತುಗಳಿವೆ, ಪ್ರಕರಣ ದಾಖಲಾಗಿದೆ' ಎಂದು ಬೆದರಿಸಿ ಲಕ್ಷಾಂತರ ರೂ. ವಂಚಿಸುತ್ತಿದ್ದ 14 ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳು ಕೇರಳ, ಗುಜರಾತ್, ರಾಜಸ್ಥಾನ ಮೂಲದವರು ಎಂದು ಗುರುತಿಸಲಾಗಿದೆ. ಆರೋಪಿಗಳ ಖಾತೆಯಲ್ಲಿದ್ದ 25.47 ಲಕ್ಷ ರೂ ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳನ್ನ ವಶಕ್ಕೆ ಪಡೆಯಲಾಗಿದೆ.
ಐವಿಆರ್ (ಇಂಟರ್ಯಾಕ್ಟಿವ್ ವಾಯ್ಸ್ ರೆಸ್ಪಾನ್ಸ್) ಮೂಲಕ ಕೊರಿಯರ್ ಕಂಪನಿಯ ಪ್ರತಿನಿಧಿಗಳ ಸೋಗಿನಲ್ಲಿ ಕರೆ ಮಾಡುತ್ತಿದ್ದ ಆರೋಪಿಗಳು, 'ನೀವು ಕಳುಹಿಸಿರುವ ನಿಷೇಧಿತ ಪದಾರ್ಥಗಳಿರುವ ಕೊರಿಯರ್' ಅನ್ನು ಮುಂಬೈ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ' ಎನ್ನುತ್ತಿದ್ದರು. ಇದಾದ ಕೆಲವೇ ಕ್ಷಣಗಳಲ್ಲಿ ಇನ್ನೊಂದು ನಂಬರ್ ಮೂಲಕ ಕರೆ ಮಾಡುತ್ತಿದ್ದ ಅದೇ ಆರೋಪಿಗಳು 'ಮುಂಬೈ ಪೊಲೀಸ್/ಎನ್ಸಿಬಿ/ಸಿಬಿಐ/ಇಡಿ ಅಥವಾ ಆರ್ಬಿಐ ಅಧಿಕಾರಿಗಳ ಹೆಸರಿನಲ್ಲಿ ನಿಮ್ಮ ವಿರುದ್ಧ ಪ್ರಕರಣ ದಾಖಲಾಗಲಿದೆ. ಆದ್ದರಿಂದ ನಿಮ್ಮನ್ನು ವಿಚಾರಣೆಗೊಳಪಡಿಸಬೇಕಿದೆ' ಎಂದು ಬೆದರಿಸುತ್ತಿದ್ದರು. ಬಳಿಕ ಕೆಲವೊಮ್ಮೆ ಹಣ ವರ್ಗಾಯಿಸಿಕೊಂಡರೆ, ಇನ್ನೂ ಕೆಲವೊಮ್ಮೆ ಬ್ಯಾಂಕ್ ಖಾತೆಗಳು ಹಾಗೂ ವೈಯಕ್ತಿಕ ದಾಖಲೆಗಳನ್ನ ಪಡೆದು ಆನ್‌ಲೈನ್ ಮೂಲಕ ಹಣ ವರ್ಗಾಯಿಸಿಕೊಂಡು ವಂಚಿಸುತ್ತಿದ್ದರು.
ಈ ಮಾದರಿಯ ಪ್ರಕರಣಗಳು ಅಧಿಕವಾಗುತ್ತಿದ್ದ ಹಿನ್ನೆಲೆಯಲ್ಲಿ ಬೆಂಗಳೂರು ಸಂಚಾರಿ ಪೂರ್ವ ವಿಭಾಗದ ಡಿಸಿಪಿ ಕುಲದೀಪ್ ಕುಮಾರ್ ಜೈನ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿ, ತನಿಖೆ ನಡೆಸುವಂತೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಆದೇಶಿಸಿದ್ದರು. ಕಳೆದ ಒಂದು ವರ್ಷಗಳ ಅವಧಿಯಲ್ಲಿ ದಾಖಲಾಗಿದ್ದ ಸುಮಾರು 330 ಪ್ರಕರಣಗಳ ಸಮಗ್ರ ತನಿಖೆ ನಡೆಸಿದ ವಿಶೇಷ ತನಿಖಾ ತಂಡ ರಾಜಸ್ಥಾನ ಮೂಲದ ಲಲಿತ್ ಕುಮಾರ್, ರಮೇಶ್ ಕುಮಾರ್, ದಿಲೀಪ್ ಸೋನಿ, ಗುಜರಾತ್ ಕಾಂಜಿ ಭಾಯಿ ರಬಾರಿ, ಕರ್ನಾಟಕದ ಭಟ್ಕಳ ಮೂಲದ ಅಸೀಂ ಅಪಂದಿ, ಮೊಹಮ್ಮದ್ ಸಲೀಂ ಸೈಫ್, ಕೇರಳ ಮೂಲದ ನೌಫೆಲ್ ಕೆ.ಪಿ, ರಿಯಾಜ್ ಕೆ.ಎಸ್, ನೌಫೆಲ್, ಅರ್ಷದ್ ಹಾಗೂ ಆಶಿಕ್ ಎಂ.ಪಿ ಸೇರಿದಂತೆ ಒಟ್ಟು 14 ಜನ ಆರೋಪಿಗಳನ್ನ ಬಂಧಿಸಿದೆ.
ಆರೋಪಿಗಳ ಬಂಧನದಿಂದ ಬೆಂಗಳೂರು ನಗರದಲ್ಲಿ ದಾಖಲಾಗಿದ್ದ ಆರು ಪ್ರಕರಣಗಳು ಪತ್ತೆಯಾಗಿದ್ದು, ಸುಮಾರು 2.10 ಕೋಟಿಯಷ್ಟು ವಂಚನೆಯಾಗಿರುವುದು ತಿಳಿದು ಬಂದಿದೆ. ಹಾಗೆಯೇ ನ್ಯಾಷನಲ್ ಸೈಬರ್ ಕ್ರೈಂ ಪೋರ್ಟಲ್ ಹೆಲ್ಪ್ ಲೈನ್ ಮೂಲಕ ವರದಿಯಾಗಿದ್ದ 546 ಪ್ರಕರಣಗಳಲ್ಲಿ ಆರೋಪಿಗಳ ಕೈವಾಡ ಇರುವುದಾಗಿ ಮಾಹಿತಿ ಸಿಕ್ಕಿದೆ. ಈ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿರುವ ಇನ್ನೂ ಕೆಲವು ಆರೋಪಿಗಳಿಗಾಗಿ ಪತ್ತೆಕಾರ್ಯ ಮುಂದುವರೆದಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
ಇದನ್ನೂ ಓದಿ: ಮಗನ ಶವ ಸಾಗಾಟದ ವೇಳೆ ಸಿಕ್ಕಿಬಿದ್ದ ಉದ್ಯಮಿ: ವಿಚ್ಛೇದನಕ್ಕಾಗಿ ಕಾಯುತ್ತಿದ್ದ ಮಹಿಳೆ ಎಂದ ಪೊಲೀಸರು!