ಬೆಂಗಳೂರು: ಪಾದರಾಯನಪುರದ ಬಳಿ ಬಿಬಿಎಂಪಿ ಹಾಗೂ ಆರೊಗ್ಯಧಿಕಾರಿಗಳ ಮೇಲೆ ಹಲ್ಲೆ ಮಾಡಿದ ಆರೊಪಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾದ ಕಾರಣ ರಾಮನಗರ ಜೈಲಿನಿಂದ ಸರಕಾರದ ನಿರ್ಧಾರದಂತೆ ಈಶಾನ್ಯ ವಿಭಾಗದ ಸಂಪಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಹಜ್ ಭವನಕ್ಕೆ ಶಿಫ್ಟ್ ಮಾಡಲಾಗಿದೆ.
ಆರೋಪಿಗಳನ್ನ ಶಿಫ್ಟ್ ಮಾಡಿದ್ದಕ್ಕೆ ಸ್ಥಳೀಯ ಪೊಲೀಸರಿಂದ ಭಾರೀ ವಿರೋಧ ವ್ಯಕ್ತವಾಗಿದ್ದು, ಹಜ್ ಭವನದ ಸುತ್ತಮುತ್ತ ಕರೋನ ಹರಡಿದರೆ ಏನು ಗತಿ..!? ಈಗಾಗಲೆ ಹಜ್ ಭವನದಲ್ಲಿ ನೂರಾರು ಮಂದಿ ಕ್ವಾರಂಟೈನ್ ಆಗಿದ್ದಾರೆ, 190 ತಬ್ಲಿಘಿಗಳು ಇದ್ದಾರೆ ಎಂದು ಆತಂಕ ಹೊರಹಾಕಿದ್ದಾರೆ.
ಈ ವಿಷಯವನ್ನು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರಿಗೆ ಈಶಾನ್ಯ ವಿಭಾಗದ ಪೊಲೀಸರು ಮನವರಿಕೆ ಮಾಡಿದ್ದಾರೆ. ಆದರೆ, ಈಶಾನ್ಯ ವಿಭಾಗದ ಪೊಲೀಸರ ಮನವಿಗೆ ಒಪ್ಪದ ಕಮೀಷನರ್, ಸರ್ಕಾರ ಈಗಾಗಲೇ ನಿರ್ಧಾರ ಮಾಡಿ ಆಗಿದೆ, ನಾವೇನೂ ಹೇಳೋ ಪರಿಸ್ಥಿತಿಯಲ್ಲಿ ಇಲ್ಲ. ಆಜ್ಞೆಯನ್ನು ಪಾಲಿಸಬೇಕಷ್ಟೇ ಎಂದು ಖಡಕ್ ಆಗಿ ಹೇಳಿದ್ದಾರೆ. ಇದರಿಂದಾಗಿ ಜೀವ ಭಯದಲ್ಲಿ ಕೆಲಸ ಮಾಡುವ ಪರಿಸ್ಥಿತಿ ಪೊಲೀಸರಲ್ಲಿದೆ ಎಂದು ಹೆಸರು ಹೇಳಲು ಇಚ್ಚೆ ಪಡದ ಸಿಬ್ಭಂದಿ ತಿಳಿಸಿದ್ದಾರೆ.
ಪಾದರಾಯನಪುರ ಭದ್ರತೆಯಲ್ಲಿದ್ದ ಪೊಲಿಸರಿಗೆ ಶುರುವಾಯ್ತು ಆತಂಕ:
ಪಾದರಯನಪುರದಲ್ಲಿ ಗಲಾಟೆ ನಡೆದಾಗ ಗಲ್ಲಿ ಗಲ್ಲಿಗೆ ತೆರಳಿ ಹಿರಿಯ ಅಧಿಕಾರಿಗಳು, ಸಿಸಿಬಿ ಇನ್ಸ್ಪೆಕ್ಟರ್ , ಕೆಎಸ್ ಆರ್ಪಿ ತುಕಡಿಗಳು ಗಲಾಟೆ ನಿಯಂತ್ರಣ ಮಾಡಿ ನೂರಕ್ಕು ಹೆಚ್ಚು ಆರೋಪಿಗಳನ್ನು ಬಂಧಿಸಿದ್ದರು. ಸದ್ಯ ಪಾದರಾಯನಪುರದಲ್ಲಿ ಬಹಳಷ್ಟು ಕೊರೊನಾ ಪಾಸಿಟಿವ್ ಕಂಡು ಬಂದ ಕಾರಣ ಪೊಲೀಸರಲ್ಲಿ ತೀವ್ರ ಆತಂಕ ಶುರುವಾಗಿದೆ. ಎಲ್ಲಿ ನಮಗೂ ಕೊರೊನಾ ಸೊಂಕು ತಗುಲಿದೆಯೋ ಎನ್ನುವ ಆತಂಕದಲ್ಲಿ ಪೊಲೀಸರಿದ್ದಾರೆ.
ಇನ್ನು ಪಾದರಾಯನಪುರಕ್ಕೆ ತೆರಳಿದ ಸಿಬ್ಬಂದಿ ಆರೋಗ್ಯ ತಪಾಸಣೆ ನಡೆಸುವಂತೆ ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಸಿಬ್ಭಂದಿ ಸೂಚನೆ ನೀಡಿದ್ದಾರೆ.