ಬೆಂಗಳೂರು: ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಗಲಭೆ ಪ್ರಕರಣದ ಆರೋಪಿಗಳಿಬ್ಬರು ಜೈಲಿನಲ್ಲಿ ಕೂತು ಮೊಬೈಲ್ನಲ್ಲಿ ಆನ್ ಲೈನ್ ಕೋರ್ಟ್ ಕಲಾಪ ವೀಕ್ಷಿಸಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಈ ಕುರಿತು ವಿವರಣೆ ನೀಡುವಂತೆ ರಾಜ್ಯ ಅಡ್ವೋಕೇಟ್ ಜನರಲ್ಗೆ ಸೂಚಿಸಿದೆ.
ಪ್ರಕರಣದಲ್ಲಿ ಜಾಮೀನು ನಿರಾಕರಿಸಿರುವ ಎನ್‌ಐಎ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ಹಿರಿಯ ನ್ಯಾಯಮೂರ್ತಿ ಅರವಿಂದ ಕುಮಾರ್ ಹಾಗೂ ನ್ಯಾ. ಪ್ರದೀಪ್ ಸಿಂಗ್ ಯೆರೂರ್ ಅವರಿದ್ದ ವಿಭಾಗೀಯ ಪೀಠ ಇಂದು ವಿಚಾರಣೆ ನಡೆಸುತ್ತಿತ್ತು. ಎನ್‌ಐಎ ಪರ ವಕೀಲರಾದ ಪಿ. ಪ್ರಸನ್ನಕುಮಾರ್ ಅವರು ಕೋರ್ಟ್ ಗೆ ಹಾಜರಾಗಿ ವಾದ ಮಂಡಿಸುತ್ತಿದ್ದರು.
ಈ ಕಲಾಪವನ್ನು ಪ್ರಕರಣದ 15ನೇ ಆರೋಪಿ ಶೇಕ್ ಮೊಹಮ್ಮದ್ ಬಿಲಾಲ್ ಹಾಗೂ 25ನೇ ಆರೋಪಿ ಮೊಹಮ್ಮದ್ ಶರೀಫ್ ಹೈಕೋರ್ಟ್‌ನ ವಿಡಿಯೋ ಕಾನ್ಫರೆನ್ಸ್ ಲಿಂಕ್ ಬಳಸಿ ಜೈಲಿನಿಂದಲೇ ಮೊಬೈಲ್ ಮೂಲಕ ವೀಕ್ಷಿಸಿದ್ದು ಬೆಳಕಿಗೆ ಬಂತು. ಈ ವಿಚಾರವನ್ನು ಎನ್ಐಎ ಪರ ವಕೀಲ ಪ್ರಸನ್ನ ಕುಮಾರ್ ಅವರ ಕಿರಿಯ ಸಹೋದ್ಯೋಗಿಗಳು ವಾದ ಮುಗಿಸುವ ವೇಳೆಗೆ ಗಮನಕ್ಕೆ ತಂದು ಅದರ ಸ್ಕ್ರೀನ್ ಶಾಟ್ ಕಳುಹಿಸಿಕೊಟ್ಟರು.
ಈ ವಿಚಾರವನ್ನು ಪ್ರಸನ್ನಕುಮಾರ್ ಅವರು ನ್ಯಾಯಾಲಯದ ಗಮನಕ್ಕೆ ತಂದರು. ಆರೋಪಿಗಳು ಕಲಾಪ ವೀಕ್ಷಣೆ ಮಾಡಿರುವ ಸ್ಕ್ರೀನ್ ಶಾಟ್ ಗಮನಿಸಿದ ಪೀಠ, ಆರೋಪಿಗಳ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿತು. ಅಲ್ಲದೇ ಜೈಲಿನಲ್ಲಿ ಕೈದಿಗಳಿಗೆ ಮೊಬೈಲ್ ಸಿಕ್ಕಿದ್ದು ಹೇಗೆ? ಎಂಬ ಕುರಿತು ಅಡ್ವೋಕೇಟ್ ಜನರಲ್ ವಿವರಣೆ ನೀಡಬೇಕು ಎಂದು ಸರ್ಕಾರದ ಪರ ವಕೀಲರಿಗೆ ಸೂಚಿಸಿ ವಿಚಾರಣೆ ಮುಂದೂಡಿತು.