ಬೆಂಗಳೂರು: ಮಂಗಳೂರಿನಲ್ಲಿ ನಡೆದ ಆಟೋ ಸ್ಫೋಟ ಪ್ರಕರಣ ಸಂಬಂಧ ಗಂಭೀರವಾಗಿ ಗಾಯಗೊಂಡಿರುವ ಆರೋಪಿ ಶಾರೀಕ್ಗೂ ಸುದ್ದುಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಉಗ್ರ ಕೃತ್ಯವೆಸಗಲು ಸಂಚು ರೂಪಿಸಿದ್ದ ಆರೋಪದಡಿ ಪ್ರಕರಣದ 12ನೇ ಆರೋಪಿ ಅಬ್ದುಲ್ ಮತಿನ್ಗೂ ನಂಟು ಹೊಂದಿರುವುದು ತನಿಖೆ ವೇಳೆ ತಿಳಿದು ಬಂದಿದೆ.
ತಮಿಳುನಾಡಿನಲ್ಲಿ ನಡೆದಿದ್ದ ಹಿಂದೂ ಮುಖಂಡ ಸುರೇಶ್ ಹತ್ಯೆ ಪ್ರಕರಣದ ಆರೋಪಿಗಳಾದ ಮೊಹಮ್ಮದ್ ಪಾಷಾ, ಖ್ವಾಜಾ ಮೊಯಿದ್ದೀನ್, ಮನ್ಸೂರ್ ಖಾನ್ ಸೇರಿದಂತೆ ಹಲವು ಶಂಕಿತ ಉಗ್ರರ ಜೊತೆ ಗುರಪ್ಪನಪಾಳ್ಯದ ಮನೆಯೊಂದರಲ್ಲಿ ಅಬ್ದುಲ್ ಮತೀನ್ ನೆಲೆಸಿದ್ದ.
ಶಿವಮೊಗ್ಗದ ತೀರ್ಥಹಳ್ಳಿಯ ಮೂಲದ ಅಬ್ದುಲ್ ಶಂಕಿತ ಉಗ್ರರೊಂದಿಗೆ ಗುರುತಿಸಿಕೊಂಡಿದ್ದಲ್ಲದೇ ದೇಶದಲ್ಲಿ ಹಿಂದೂ ಮುಖಂಡರ ಹತ್ಯೆಗೆ ಮನೆಯಲ್ಲಿ ಸಭೆ ನಡೆಸಿದ್ದರು. ಐಸಿಸ್ ಹಾಗೂ ಸಿಮಿ ಸಂಘಟನೆಗಳಲ್ಲಿ ತೊಡಗಿದ್ದ ಶಂಕಿತ ಆರೋಪಿಗಳು ದೇಶದೆಲ್ಲೆಡೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಆರೋಪದ ಹಿನ್ನೆಲೆ ಸುದ್ದುಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕುಕ್ಕರ್ ಬಾಂಬ್ ಇಟ್ಟು ಸ್ಫೋಟಿಸಿರುವ ಬಾಂಬರ್ ಮೊಹಮ್ಮದ್ ಶಾರೀಕ್ ಹಾಗೂ ಅಬ್ದುಲ್ ಮತೀನ್ ಒಂದೇ ಜಿಲ್ಲೆಯವರಾಗಿದ್ದು, ಇಬ್ಬರು ಪರಸ್ಪರ ಸಂಪರ್ಕ ಹೊಂದಿದ್ದರು. ಅಂತಾರಾಷ್ಟ್ರೀಯ ಉಗ್ರ ಸಂಘಟನೆಗಳೊಂದಿಗೆ ಮತೀನ್ ಭಾಗಿಯಾಗಿದ್ದ. ಹಲವು ವರ್ಷಗಳಿಂದ ತಲೆಮರೆಸಿಕೊಂಡಿರುವ ಮತೀನ್ನ ಬಗ್ಗೆ ಸುಳಿವು ನೀಡಿದವರಿಗೆ 2 ಲಕ್ಷ ನಗದು ಬಹುಮಾನ ನೀಡಲಾಗುವುದು ಎಂದು ಇತ್ತೀಚೆಗಷ್ಟೇ ಎನ್ಐಎ ಪ್ರಕಟಣೆ ಹೊರಡಿಸಿತ್ತು.
ಓದಿ: ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್.. ಶಾರಿಕ್ನೊಂದಿಗೆ ಸಂಪರ್ಕದಲ್ಲಿದ್ದ ಮಹಮದ್ ರುಹುಲ್ಲಾ ವಶಕ್ಕೆ