ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಅನ್ಯಕೋಮಿನ ಯುವಕನೊಬ್ಬನನ್ನು ಬ್ಯಾಟರಾಯನಪುರ ಠಾಣೆ ಪಿಎಸ್‌ಐ ಹರೀಶ್ ಠಾಣೆಗೆ ಕರೆತಂದು ಚಿತ್ರಹಿಂಸೆ ನೀಡಿದ ಆರೋಪ ಪ್ರಕರಣ ಸಂಬಂಧ ಕೆಂಗೇರಿ ಉಪ ವಿಭಾಗದ ಎಸಿಪಿ ಕೋದಂಡರಾಮಯ್ಯ ಅವರು ಪಶ್ಚಿಮ ವಿಭಾಗದ ಡಿಸಿಪಿ ಡಾ.ಸಂಜೀವ್ ಪಾಟೀಲ್ ಅವರಿಗೆ ಸೋಮವಾರ ವರದಿ ನೀಡಲಿದ್ದಾರೆ.
ಪಾದರಾಯನಪುರ ನಿವಾಸಿ ತೌಸಿಫ್ ಪಾಷ ನೆರೆ ಮನೆಯವರೊಂದಿಗೆ ಜಗಳವಾಡಿದ ಸಂಬಂಧ ವಶಕ್ಕೆ ಪಡೆದಿದ್ದ ಸಬ್ ಇನ್ಸ್ಪೆಕ್ಟರ್ ಹರೀಶ್, ತೌಸೀಫ್‌ನನ್ನು ಠಾಣೆಗೆ ಕರೆತಂದು ಮನಸೋ ಇಚ್ಛೆ ಥಳಿಸಿದ್ದರು. ಜತೆಗೆ ಒತ್ತಾಯ ಪೂರ್ವಕವಾಗಿ ಪೊಲೀಸರು ತೌಸಿಫ್‌ನ ಗಡ್ಡ ಬೋಳಿಸಿ ಅಮಾನವೀಯವಾಗಿ ವರ್ತಿಸಿದ್ದರು ಎನ್ನುವ ಆರೋಪ ಕೇಳಿಬಂದಿತ್ತು.
ಎರಡು ದಿನಗಳ ಬಳಿಕ ತೌಸಿಫನನ್ನು ಮನೆಗೆ ಕಳುಹಿಸಿದ್ದಾರೆ. ನಿತ್ರಾಣ ಸ್ಥಿತಿಯಲ್ಲಿದ್ದ ಪುತ್ರನನ್ನು ಕುಟುಂಬದವರು ಆಸ್ಪತ್ರೆಗೆ ದಾಖಲಿಸಿದ್ದರು. ಪೊಲೀಸರ ಹಲ್ಲೆಯಿಂದ ತೌಸಿಫ್ಪ್ ಗುಪ್ತಾಂಗಕ್ಕೂ ಸಹ ಪೆಟ್ಟಾಗಿದೆ ಎಂದು ಹೇಳಲಾಗ್ತಿದೆ.
ಈ ಸಂಬಂಧ ಟ್ವಿಟರ್‌ನಲ್ಲಿ ಮಾನವ ಹಕ್ಕು ಕಾರ್ಯಕರ್ತರೊಬ್ಬರು ಪಶ್ಚಿಮ ವಿಭಾಗದ ಡಿಸಿಪಿಗೆ ದೂರು ನೀಡಿದ್ದರು. ಈ ಹಲ್ಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಡಿಸಿಪಿ ಸಂಜೀವ ಪಾಟೀಲ್, ಘಟನೆ ಸಂಬಂಧ ವಿಚಾರಣೆ ನಡೆಸಿ ವರದಿ ನೀಡುವಂತೆ ಕೆಂಗೇರಿ ಉಪ ವಿಭಾಗದ ಎಸಿಪಿ ಕೋದಂಡರಾಮಯ್ಯ ಅವರಿಗೆ ಸೂಚಿಸಿದ್ದರು.
ಅದರಂತೆ ಹಲ್ಲೆಗೊಳಗಾದ ತೌಸಿಫ್ ಹಾಗೂ ಹಲ್ಲೆಗೈದ ಪಿಎಸ್‌ಐ ಹರೀಶ್ ಅವರನ್ನು ಎಸಿಪಿ ವಿಚಾರಣೆ ನಡೆಸಿದ್ದು, ಸೋಮವಾರ ಡಿಸಿಪಿಗೆ ವರದಿ ಸಲ್ಲಿಸಲ್ಲಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.