ಬೆಂಗಳೂರು: ವ್ಯಾಪಾರದಲ್ಲಿ ವಂಚನೆ ಆರೋಪದಡಿ ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್ ವಿರುದ್ದ ಎಫ್‌ಐಆರ್ ದಾಖಲಾಗಿದೆ.
ಸೋದರ ಸಂಬಂಧಿಯಾಗಿರುವ ಪ್ರಶಾಂತ್ ಎಂಬವರು ಉದಯ್ ಗರುಡಾಚಾರ್ ಜೊತೆ ಸೇರಿಕೊಂಡು ಮೆವರಿಕ್ ಹೋಲ್ಡಿಂಗ್ ಅಂಡ್ ಇನ್ವೆಸ್ಟ್ ಮೆಂಟ್ ಪ್ರೈ.ಲಿ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ್ದರು. ಈ ವೇಳೆ ಲಾಭದಲ್ಲಿ ಇಂತಿಷ್ಟು ಭಾಗ ಕೊಡುವುದಾಗಿ ಶಾಸಕ ಗರುಡಾಚಾರ್ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಒಪ್ಪಂದ ಪ್ರಕಾರ ಹಣ ಕೇಳಿದಾಗ ವರಸೆ ತೆಗೆದ ಶಾಸಕ, ಮನೆಗೆ ಕರೆದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಹಣ ಹೂಡಿಕೆ ಮಾಡಿದ ಪ್ರಶಾಂತ್ ಜೆ.ಪಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಆರೋಪದ ಬಗ್ಗೆ ಉದಯ್ ಗರುಡಾಚಾರ್ ಪ್ರತಿಕ್ರಿಯಿಸಿದ್ದು, ಬೆಳಗ್ಗೆ ನನಗೆ ವಿಚಾರ ಗೊತ್ತಾಯಿತು. ದೂರುದಾರ ನನ್ನ ತಮ್ಮ ಅಲ್ಲ, ಸೋದರತ್ತೆಯ ಮಗ. 10 ವರ್ಷಗಳಿಂದ ನನಗೂ ಆತನಿಗೂ ಸಂಪರ್ಕವೇ ಇರಲಿಲ್ಲ. ದಿಢೀರನೆ ಪೊಲೀಸರು ಬಂದು, ನೀವು ಆತನ ಬ್ಯುಸಿನೆಸ್ ಪಾರ್ಟನರ್, ನೀವು ಮೋಸ ಮಾಡಿದ್ದೀರಿ ಎಂದು ದೂರು ಬಂದಿದೆ ಎಂದರು. ಈ ಹುಡುಗ ನನಗೆ ಬ್ಲಾಕ್‌ಮೇಲ್ ಮಾಡಿದ್ದಾನೆ. ಈತನ ಹಿನ್ನೆಲೆ ಪರೀಕ್ಷಿಸಬೇಕು, ಆತನಿಗೆ ಕೆಲಸವಿಲ್ಲ. ಹೆಂಡತಿಯ ಸಂಪಾದನೆಯಲ್ಲಿ ಆತ ಬದುಕುತ್ತಿದ್ದಾನೆ. ವ್ಯವಹಾರಕ್ಕೆ ಹೂಡಿಕೆ ಮಾಡುವ ಸಾಮರ್ಥ್ಯವೇ ಇಲ್ಲ. ಹಬ್ಬದ ದಿನ ಶುಭಾಷಯ ಹೇಳೋ ಬದ್ಲು ಈ ವಿಚಾರದ ವಿವರಣೆ ಕೊಡ್ಬೇಕಾಗಿರೋದು ಬೇಸರದ ಸಂಗತಿ. ನಾನು ಪೊಲೀಸರು ಹಾಗೂ ಸಿಸಿಬಿಗೆ ದೂರು ನೀಡಲು ನಿರ್ಧರಿಸಿದ್ದೇನೆ. ನನ್ನ ಜೊತೆ ಹೂಡಿಕೆ ಮಾಡಿದ್ದೀನಿ ಎನ್ನುವ ಬಗ್ಗೆ ಆತ ದಾಖಲೆ ನೀಡಲಿ. ಯಾರಾದ್ರು ಹೆಸರು ಮಾಡಿದ್ರೆ, ಪರಿಶ್ರಮದಿಂದ ಮೇಲೆ ಬಂದರೆ ಹೀಗೆ ಮಾಡೋರು ಇರ್ತಾರೆ. ಈಗ ಕಾನೂನು ಬದ್ಧವಾಗಿ ಆತನ ವಿರುದ್ಧ ನಾನು ದೂರು ನೀಡಲಿದ್ದೇನೆ ಎಂದು ಹೆಳಿದರು.