ಬೆಂಗಳೂರು: ನಾಲ್ಕು ಮದುವೆಯಾಗಿದ್ದಲ್ಲದೆ 23ಕ್ಕೂ ಹೆಚ್ಚು ಯುವತಿಯರಿಗೆ ವಿವಾಹ ಆಗುವುದಾಗಿ ನಂಬಿಸಿ ಮೋಸ ಮಾಡಿ ಬ್ಯಾಡರಹಳ್ಳಿ ಪೊಲೀಸರಿಂದ ಬಂಧಿತನಾಗಿರುವ ಆರೋಪಿ ಸುರೇಶ್ ವಿರುದ್ಧ ಸಾಲು ಸಾಲು ಪ್ರಕರಣಗಳು ದಾಖಲಾಗುತ್ತಿವೆ.
ಪೊಲೀಸರ ಕೈಗೆ ಸಿಕ್ಕಿಬೀಳುತ್ತಿದ್ದಂತೆ ಈತನ ಮೋಸದ ಪ್ರವೃತ್ತಿ ಬಯಲಾಗಿದೆ. ಹುಡುಗಿಯರಿಗೆ ಮೋಸ ಮಾಡಿದ್ದು ಮಾತ್ರವಲ್ಲದೆ ಮಂತ್ರಿಗಳ ಪರಿಚಯವಿದೆ ಎಂದು ರಾಜಕೀಯ ನಾಯಕರೊಂದಿಗೆ ತೆಗೆಸಿಕೊಂಡಿರುವ ಫೋಟೋಗಳನ್ನು ತೋರಿಸಿ ಮುಗ್ಧರನ್ನು ಯಾಮಾರಿಸುತ್ತಿದ್ದನಂತೆ.
ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಹತ್ತಾರು ಯುವಕರಿಂದಲೂ ಹಣ ಪೀಕಿದ್ದಾನಂತೆ. ಇದೇ ರೀತಿ ಗಿರೀಶ್ ಎಂಬುವರಿಗೆ ಪೊಲೀಸ್ ಕೆಲಸ ಕೊಡಿಸುವುದಾಗಿ ಹೇಳಿ 10 ಲಕ್ಷ ರೂಪಾಯಿ ತೆಗೆದುಕೊಂಡು ವಂಚಿಸಿದ್ದಾನೆ ಎನ್ನಲಾಗಿದೆ. ಈತನ ವಂಚನೆ ಪುರಾಣ ಬೆಳಕಿಗೆ ಬರುತ್ತಿದ್ದಂತೆ ಕೆಂಗೇರಿ, ಆರ್.ಆರ್.ನಗರ, ಕೆ.ಎಸ್.ಲೇಔಟ್ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ.
ಮದುವೆಯಾಗಲು ಮ್ಯಾಟ್ರಿಮೋನಿ ಸೇರಿ ಸಾಮಾಜಿಕ ಜಾಲತಾಣ ಬಳಸುವುದನ್ನು ಬಂಡವಾಳ ಮಾಡಿಕೊಂಡಿದ್ದ ಸುರೇಶ, ವಿಚ್ಛೇದನ ಪಡೆದಿರುವ ಮಹಿಳೆಯರನ್ನು ಮದುವೆಯಾಗುವುದಾಗಿ ಹೇಳಿ ಅವರಿಂದ ಹಣ ಪೀಕುತ್ತಿದ್ದನಂತೆ. ಹೀಗೆ ಇವನಿಂದ ಹಣ ಕಳೆದುಕೊಂಡ ಮಹಿಳೆಯೊಬ್ಬರು ಬ್ಯಾಡರಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರಿನ ಮೇರೆಗೆ ಸುರೇಶನನ್ನು ಬಂಧಿಸಿದ ಪೊಲೀಸರಿಗೆ ಇವನ ಅಸಲಿ ಬಂಡವಾಳ ಗೊತ್ತಾಗಿದೆ.
ನಾಲ್ವರನ್ನು ಮದುವೆ ಆಗಿರುವ ಸುರೇಶ, 23ಕ್ಕೂ ಹೆಚ್ಚು ಗರ್ಲ್ ಫ್ರೆಂಡ್ಸ್ ಹೊಂದಿರುವುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದ. ಮೈಸೂರು, ರಾಮನಗರ ಹಾಗೂ ಬೆಂಗಳೂರು ಸೇರಿ ವಿವಿಧೆಡೆ ಮಹಿಳೆಯರಿಗೆ ಮೋಸ ಮಾಡಿದ್ದು, ವಂಚನೆಗೊಳಗಾದ ಮಹಿಳೆಯರು ದೂರು ನೀಡಿದ್ದಾರೆ. ಸದ್ಯ ಆರೋಪಿಯು ಪೊಲೀಸ್ ಕಸ್ಟಡಿಯಲ್ಲಿ ಇರುವುದಾಗಿ ಬ್ಯಾಡರಹಳ್ಳಿ ಪೊಲೀಸರು ತಿಳಿಸಿದ್ದಾರೆ.