ಬೆಂಗಳೂರು: ಡಕಾಯಿತಿ ಪ್ರಕರಣದ ಆರೋಪಿಗಳನ್ನು ಬಂಧಿಸಲು ತೆರಳಿದ ಪಿಎಸ್‌ಐಗೆ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿರುವ ಘಟನೆ ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಘಟನೆಯಲ್ಲಿ ಉತ್ತರ ಪೊಲೀಸ್ ವಿಭಾಗದ ಯಶವಂತಪುರ ಠಾಣೆಯ ಪಿಎಸ್‌ಐ ವಿನೋದ್ ರಾಥೋಡ್ ಮತ್ತು ಕಾನ್‌ಸ್ಟೇಬಲ್ ವಲ್ಲಿಸಾಬ್ ಎಂಬುವವರು ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಒಂದು ತಿಂಗಳ ಹಿಂದೆ ಯಶವಂತಪುರ ಠಾಣೆ ವ್ಯಾಪ್ತಿಯಲ್ಲಿ ವೃದ್ಧರ ಮನೆಗೆ ನುಗ್ಗಿದ ಆರೇಳು ಆರೋಪಿಗಳು, ಪಿಸ್ತೂಲ್ ತೋರಿಸಿ ದರೋಡೆ ಮಾಡಿದ್ದರು. ಈ ಸಂಬಂಧ ಕೆಲ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಇತರ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಘಟನೆಯ ಕುರಿತು ಮಾಹಿತಿ ನೀಡಿದ್ದಾರೆ.
ಈ ಸಂಬಂಧ ತನಿಖೆ ಕೈಗೊಂಡಿದ್ದ ಪಿಎಸ್‌ಐ ವಿನೋದ್ ರಾಥೋಡ್‌ಗೆ ಮಂಗಳವಾರ ತಡ ರಾತ್ರಿ 11 ಗಂಟೆ ಸುಮಾರಿಗೆ ಸಂಜಯನಗರ ಠಾಣಾ ವ್ಯಾಪ್ತಿಯ ಹೆಬ್ಬಾಳ ಮೇಲು ಸೇತುವೆ ಬಳಿ ಮೂವರು ಆರೋಪಿಗಳು ಓಡಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಸಿಕ್ಕಿತ್ತು. ಕೂಡಲೇ ಕಾನ್‌ಸ್ಟೇಬಲ್ ವಲ್ಲಿಸಾಬ್ ಜೊತೆ ಸ್ಥಳಕ್ಕೆ ಹೋಗಿದ್ದರು.
ಆಗ ಆರೋಪಿಗಳು ಪೊಲೀಸರನ್ನು ಕಂಡು ಭೂಪಸಂದ್ರದ ರೈಲ್ವೆ ಗೇಟ್ ಮೂಲಕ ತೋಟ ಒಂದರ ಬಳಿ ಪರಾರಿಯಾಗಲು ಮುಂದಾಗಿದ್ದರು. ಹಿಂಬಾಲಿಸಿದ ಪಿಎಸ್‌ಐ ಆರೋಪಿಗಳನ್ನು ಹಿಡಿಯಲು ಮುಂದಾಗಿದ್ದರು.
ಈ ವೇಳೆ, ಆರೋಪಿಯೊಬ್ಬ ಕಾನ್‌ಸ್ಟೇಬಲ್ ವಲ್ಲಿಸಾಬ್ರನ್ನು ತಳ್ಳಿದ್ದಾನೆ. ಆಗ ಪಿಎಸ್‌ಐ ವಿನೋದ್ ರಾಥೋಡ್, ಕೆಳಗೆ ಬೀಳುತ್ತಿದ್ದ ಪೇದೆಯನ್ನು ಹಿಡಿದುಕೊಳ್ಳಲು ಯತ್ನಿಸಿದ್ದಾರೆ. ಅದೇ ವೇಳೆ ಆರೋಪಿಗಳು ಪಿಎಸ್‌ಐ ಕೊಲೆ ಮಾಡಲು ಮುಂದಾಗಿದ್ದು, ಎರಡು ಕೈಗಳ ಮೊಣಕೈಗೆ ಚಾಕುವಿನಿಂದ ಇರಿದಿದ್ದಾರೆ ಎಂದು ತಿಳಿದು ಬಂದಿದೆ.
ಸದ್ಯ ಪಿಎಸ್‌ಐ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಸಂಬಂಧ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಆರೋಪಿಗಳ ವಿಚಾರಣೆ:
ಪಿಎಸ್‌ಐ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ಕುರಿತು ಮಾಹಿತಿ ಸಂಗ್ರಹಿಸಲು ದರೋಡೆ ಪ್ರಕರಣದಲ್ಲಿ ಜೈಲು ಸೇರಿದ ಆರೋಪಿಗಳನ್ನು ಪೊಲೀಸ್ ಸಿಬ್ಬಂದಿ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಜಗಳ.. ಸ್ನೇಹಿತನ ಮರ್ಮಾಂಗವನ್ನೇ ಕತ್ತರಿಸಿದ ಯುವಕ!