ಬೆಂಗಳೂರು: ಗ್ಯಾಸ್ ಕಟರ್ ಬಳಸಿ ಎಟಿಎಂ ದೋಚಿದ್ದ ಕಳ್ಳರ ಬೆನ್ನು ಹತ್ತಿದ ಮಾದನಾಯಕನಹಳ್ಳಿ ಪೊಲೀಸರು ನಖಲಿ ದಾಖಲೆ ಸೃಷ್ಟಿಸಿ ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ಮಾಡುತ್ತಿದ್ದ ಬಾಂಗ್ಲಾ ಗ್ಯಾಂಗ್ ಅನ್ನು ಪತ್ತೆ ಮಾಡಿದ್ದಾರೆ. ಮಾದನಾಯಕನಹಳ್ಳಿ ಇನ್ಸ್ಪೆಕ್ಟರ್ ಮಂಜುನಾಥ್ ಮತ್ತು ತಂಡದ ಈ ಕಾರ್ಯಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಅಭಿನಂದನೆ ಸಲ್ಲಿಸಿದ್ದಾರೆ.
ತಲೆಮರೆಸಿಕೊಂಡಿದ್ದ ಭಯೋತ್ಪಾದಕನೊಬ್ಬನನ್ನು ಜಮ್ಮು ಕಾಶ್ಮೀರ ಪೊಲೀಸರು ನಗರದಲ್ಲಿ ಬಂಧಿಸಿದ್ದರು. ಈ ಘಟನೆ ಬೆನ್ನಲ್ಲೇ ಬೆಂಗಳೂರು ಗ್ರಾಮಾಂತರ ಪೊಲೀಸರು ಅಕ್ರಮ ಬಾಂಗ್ಲಾದೇಶಿ ನುಸುಳುಕೋರರಿಗೆ, ಆಧಾರ್ ಕಾರ್ಡ್ ಹಾಗೂ ಇನ್ನಿತರೆ ದಾಖಲೆಗಳನ್ನು ಒದಗಿಸುತ್ತಿದ್ದ ಜಾಲವೊಂದನ್ನು ಭೇದಿಸಿದ್ದಾರೆ. ಸೈದುಲ್ ಅಕೂನ್, ಮೊಹಮ್ಮದ್ ಅಬ್ದುಲ್ ಸಲೀಂ, ಸುಹೈಲ್ ಅಹಮದ್, ಮೊಹಮ್ಮದ್ ಹಿದಾಯತ್, ಸೈಯದ್ ಮನ್ಸೂರ್, ಅಮೀನ್ ಸೇಠ್, ಆಯಿಷಾ, ರಾಕೇಶ್, ಇಸ್ತಿಯಾಕ್ ಪಾಷಾ ಬಂಧಿತರು. ರಾಕೇಶ್ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದು ಇಸ್ತಿಯಾಕ್ ಫಾರ್ಮಾಸಿಸ್ಟ್ ಆಗಿದ್ದಾನೆ.
ಹಿಂದಿನ ಲೂಟಿ ಪ್ರಕರಣ: ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಎಟಿಎಂ ಜೊತೆಗೆ 18 ಲಕ್ಷ ರೂಪಾಯಿಗಳ ಲೂಟಿ ಪ್ರಕರಣ ನಡೆದಿತ್ತು. ಈ ಪ್ರಕರಣ ತನಿಖೆ ವೇಳೆ ಅಕ್ರಮವಾಗಿ ದೇಶ ನುಸುಳಿದ್ದ ಬಾಂಗ್ಲಾದೇಶ ಪ್ರಜೆಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ನಕಲಿ ದಾಖಲೆಗಳನ್ನು ಒದಗಿಸುವ ಜಾಲದ ಬಗ್ಗೆ ಸುಳಿವು ಸಿಕ್ಕಿದೆ. ಈ ಪ್ರಕರಣದ ಪ್ರಮುಖ ಆರೋಪಿ ಸೈದುಲ್ ಅಕೂನ್ 2011ರಲ್ಲಿ ನಗರಕ್ಕೆ ಬಂದು ಬ್ಯುಸಿನೆಸ್ ಮಾಡಿಕೊಂಡಿದ್ದ. ಅಲ್ಲಿಂದ ಈವರೆಗೂ ಬಾಂಗ್ಲಾದಿಂದ ಬರುವ ನುಸುಳುಕೋರರಿಗೆ ಡಾಕ್ಟರ್ ಮತ್ತು ಗೆಜೆಟೆಡ್ ಆಫೀಸರ್ಗಳ ಹೆಸರಿನಲ್ಲಿ ನಖಲಿ ಸೀಲ್ ಮತ್ತು ಲೆಟರ್ ಹೆಡ್ ಬಳಸಿ ದಾಖಲೆ ರೆಡಿ ಮಾಡಿಸಿಕೊಡುತ್ತಿದ್ದ. ಬೆಂಗಳೂರ್ ಒನ್ನಲ್ಲಿ ಆಧಾರ್ ಕಾರ್ಡ್ ಮಾಡಿಸಿ ಅಪರಾಧ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದ.
ನಕಲಿ ಆಧಾರ್ ಕಾರ್ಡ್: ಪೊಲೀಸರು ತನಿಖೆ ನಡೆಸಿದಾಗ ಸುಮಾರು 31 ಆಧಾರ್ ಕಾರ್ಡ್ಗಳು ಪತ್ತೆಯಾಗಿವೆ. 90ಕ್ಕೂ ಹೆಚ್ಚು ಆಧಾರ್ಗೆ ಎನ್ರೋಲ್ ಮಾಡಿರುವ ಪ್ರತಿಗಳು ಸಿಕ್ಕಿವೆ. ಸದ್ಯ ಪೊಲೀಸರು ಆಧಾರ್ ಕಾರ್ಡ್ ಪಡೆದ ಬಾಂಗ್ಲಾ ಪ್ರಜೆಗಳ ಹುಡುಕಾಟದಲ್ಲಿ ನಿರತರಾಗಿದ್ದಾರೆ.
ಹಣ ವರ್ಗಾವಣೆ: ನಕಲಿ ದಾಖಲೆ ಪಡೆದು ನಗರದಲ್ಲಿ ವಾಣಿಜ್ಯ ವ್ಯವಹಾರ ನಡೆಸುತ್ತಿದ್ದ ಕಿಂಗ್ ಪಿನ್ ಹವಾಲ ಮೂಲಕ ವರ್ಷಕ್ಕೆ ಸುಮಾರು 4 ಕೋಟಿ ರೂಪಾಯಿಗಳನ್ನು ಬಾಂಗ್ಲಾದೇಶಿ ಕರೆನ್ಸಿ ಆಗಿ ಪರಿವರ್ತಿಸಿ ಆ ದೇಶಕ್ಕೆ ಈಗಾಗಲೇ ವರ್ಗಾವಣೆ ಮಾಡಿದ್ದಾನೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ.
ಸಿಬ್ಬಂದಿಗೆ ಬಹುಮಾನ: ಮಾದನಾಯಕನಹಳ್ಳಿ ಇನ್ಸ್ಪೆಕ್ಟರ್ ಮಂಜುನಾಥ್ ಕಾರ್ಯಕ್ಕೆ ಐಜಿಪಿ ಚಂದ್ರಶೇಖರ್ ಪ್ರಶಂಸೆ ವ್ಯಕ್ತಪಡಿಸಿದ್ದು 75 ಸಾವಿರ ನಗದು ಬಹುಮಾನ ಘೋಷಿಸಿದ್ದಾರೆ.
ಇದನ್ನೂ ಓದಿ: ಅಕ್ರಮ ವಲಸಿಗರಿಗೆ ಆಧಾರ್ ಕಾರ್ಡ್ ಪೂರೈಸುತ್ತಿದ್ದ ಜಾಲ ಭೇದಿಸಿದ ಪೊಲೀಸ್.. ಗೃಹ ಸಚಿವರಿಂದ ಪ್ರಶಂಸೆ