ಬೆಂಗಳೂರು: ತನ್ನ ವಿರುದ್ಧ ಪ್ರಕರಣ ದಾಖಲಿಸಿದ್ದಕ್ಕೆ ಪತ್ನಿಯನ್ನು ಮುಗಿಸಲು ಸುಪಾರಿ ನೀಡಿದ ಆರೋಪದಡಿ ಪತಿ ಸೇರಿದಂತೆ ನಾಲ್ವರನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸಿದ್ದಾರ್ಥ್ ಹೊಸಮನಿ ಎಂಬಾತನೇ ಬಂಧಿತ ಪ್ರಮುಖ ಆರೋಪಿಯಾಗಿದ್ದು, ಪತ್ನಿ ಅಪಹರಿಸಿ ಕೊಲೆ ಮಾಡಲು ಸಂಚು ರೂಪಿಸಿದ್ದ.
ಸಿದ್ದಾರ್ಥ್ ಪರಿಚಯಸ್ಥರಾದ ಯೋಗೇಶ್, ರಂಜಿತ್ ಹಾಗೂ ಬ್ಯಾಟರಾಯನಪುರ ರೌಡಿಶೀಟರ್ ಬೆಟ್ಟಪ್ಪ ಎಂಬುವರನ್ನು ಬಂಧಿಸಿ ವಿಚಾರಣೆ ನಡೆಸಿ ಮಲ್ಲೇಶ್ವರ ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಎರಡನೇ ಮದುವೆ: ವಿಮೆ ಮಲ್ಲೇಶ್ವರ ನಿವಾಸಿಯಾಗಿರುವ ಸಿದ್ದಾರ್ಥ್ ಮೂಲತಃ ವಿಮಾ ಏಜೆಂಟ್ ಆಗಿದ್ದ. ಕಳೆದ ಹತ್ತು ವರ್ಷಗಳ ಹಿಂದೆ ಶಾಲಿನಿ ಎಂಬುವರೊಂದಿಗೆ ಎರಡನೇ ಮದುವೆ ಮಾಡಿಕೊಂಡಿದ್ದ. ಶಾಲಿನಿಗೂ ಇದು ಎರಡನೇ ಮದುವೆಯಾಗಿತ್ತು. ಮದುವೆಗೂ ಮುನ್ನ ಶಾಲಿನಿ ಹಾಗೂ ಗಂಡನಿಗೂ ವಿಮೆ ಮಾಡಿಸಿದ್ದ. ಅನಾರೋಗ್ಯ ಹಿನ್ನೆಲೆಯಲ್ಲಿ ಪತಿ ಮೃತಪಟ್ಟಿದ್ದ. ವಿಮಾ ಕಂಪನಿಯಿಂದ ಶಾಲಿನಿಗೆ ವಿಮೆ ಹಣ ಕೊಡಿಸಿದ್ದ. ಈ ಪರಿಚಯ ಆತ್ಮೀಯತೆಗೆ ತಿರುಗಿ ಇಬ್ಬರು ಮದುವೆ ಮಾಡಿಕೊಂಡಿದ್ದರು.
ಮಗುವಿಗಾಗಿ ಜಗಳ: ಬಳಿಕ ದಂಪತಿಗೆ ಗಂಡು ಮಗುವಾಗಿದೆ. ಮತ್ತೊಂದೆಡೆ ಮೊದಲನೇ ಪತ್ನಿಯ ಜೊತೆಯೂ ವಾಸವಾಗಿದ್ದ ಸಿದ್ದಾರ್ಥ್ಗೆ ಎರಡು ಮಕ್ಕಳಿದ್ದಾರೆ. ಮೊದಲ ಪತ್ನಿಯ ಸಹೋದರಿಗೆ ಮಕ್ಕಳಿಲ್ಲದ ಕಾರಣ ಎರಡನೇ ಪತ್ನಿಯ ಮಗುವನ್ನೇ ನೀಡಿದ್ದ. ಈ ವಿಷಯ ತಿಳಿಯದ ಶಾಲಿನಿ ತನ್ನ ಮಗುವನ್ನು ಒಪ್ಪಿಸುವಂತೆ ಹಲವು ವರ್ಷಗಳಿಂದ ಗಂಡನ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಳು.
ಈ ಸಂಬಂಧ ಬಂಧಿತನಾಗಿ ಜೈಲು ಸೇರಿ ಹೊರಬಂದಿದ್ದ. ವಿಚಾರಣೆಗೆ ಕೋರ್ಟ್ನಿಂದ ನೋಟಿಸ್ ನೀಡಲಾಗಿತ್ತು. ಮಗು ವಿಚಾರವಾಗಿ ಪತ್ನಿಯಿಂದ ಒತ್ತಾಯ ಹೆಚ್ಚಾಗಿತ್ತು. ಇದರಿಂದ ಅಸಮಾಧಾಗೊಂಡಿದ್ದ ಸಿದ್ದಾರ್ಥ್ ಪತ್ನಿಯನ್ನ ಅಪಹರಿಸಿ ಕೊಲೆ ಮಾಡುವ ಯೋಜನೆ ರೂಪಿಸಿದ್ದ.
ಅಪಹರಣ ಪ್ಲಾನ್: ಪತ್ನಿ ಅಪಹರಿಸಲು ಸಿದ್ದಾರ್ಥ್ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದ ಯೋಗೀಶ್, ಆ್ಯಂಬುಲೆನ್ಸ್ ಚಾಲಕ ರಂಜಿತ್ರನ್ನು ಪರಿಚಯಿಸಿಕೊಂಡಿದ್ದ. ಮೊದಲಿಗೆ ಇವರ ಸಹಾಯದಿಂದ ಶಾಲಿನಿ ಅಪಹರಿಸುವ ಪ್ಲಾನ್ ರೂಪಿಸಿದ್ದ. ಆದರೆ ಆ್ಯಂಬುಲೆನ್ಸ್ ಚಾಲಕನಿಗೆ ಮಡದಿಯ ಕೊಲೆ ಅಪಹರಣ ಮಾಡುವ ವಿಷಯ ತಿಳಿಸಿರಲಿಲ್ಲ.
ಅದಕ್ಕಾಗಿಯೇ ಒಂದು ಕಥೆ ಕಟ್ಟಿದ್ದ. ತನ್ನ ಮಡದಿ ಡ್ರಗ್ಸ್ ದಾಸಳಾಗಿದ್ದು, ಮಾನಸಿಕವಾಗಿ ಖಿನ್ನತೆಗೊಳಗಾಗಿದ್ದಾಳೆ. ಅದಕ್ಕೆ ಅವಳನ್ನು ರಿಹ್ಯಾಬ್ ಸೆಂಟರ್ ಗೆ ಸೇರಿಬೇಕು. ಅದಕ್ಕೆ ಅವಳು ಒಪ್ಪುವುದಿಲ್ಲ. ಬಲವಂತವಾಗಿ ಅವಳನ್ನು ಆ್ಯಂಬುಲೆನ್ಸ್ನಲ್ಲಿ ಕರೆಕೊಂಡು ಹೋಗಬೇಕು ಎಂದಿದ್ದ. ಇದರ ಜೊತೆಗೆ ಆಸ್ಪತ್ರೆಯಲ್ಲಿ ಅಟೆಂಡರ್ ಆಗಿದ್ದ ಯೋಗೀಶ್ಗೆ ಮಡದಿಯ ಕೊಲೆಗೆ ಸ್ಕೆಚ್ ಹಾಕಿರುವ ಬಗ್ಗೆ ಮಾಹಿತಿ ನೀಡಿದ್ದ.
ಪತ್ನಿ ಕೊಲೆಗೆ ರೌಡಿಗೆ ಸುಪಾರಿ: ಆಗ ಯೋಗೀಶ್ ತನ್ನ ಮನೆಯ ಪಕ್ಕದಲ್ಲೇ ಇದ್ದ ಬೆಟ್ಟಪ್ಪ ಎಂಬ ರೌಡಿ ಜೈಲಿನಲ್ಲಿದ್ದು, ಆತನನ್ನು ಸುಪಾರಿಗೆ ಒಪ್ಪಿಸೋಣ ಎಂದು ಐಡಿಯಾ ಕೊಟ್ಟಿದ್ದ. ಅದರಂತೆ ಯೋಗೀಶ್ ಜೈಲಿಗೆ ಹೋಗಿ ಬೆಟ್ಟಪ್ಪನನ್ನು ಭೇಟಿಯಾಗಿ ವಿಷಯ ತಿಳಿಸಿದ್ದ. ಇನ್ನೂ ಸುಪಾರಿ ಹಣ ನಿಗದಿಯಾಗಿರಲಿಲ್ಲ. ಅಷ್ಟೊತ್ತಿಗೆ ಸಿಸಿಬಿ ಪೊಲೀಸರಿಗೆ ಈ ಕೊಲೆಯ ಸ್ಕೆಚ್ ಬಗ್ಗೆ ಮಾಹಿತಿ ಸಿಕ್ಕಿತ್ತು.
ಪ್ರಕರಣದ ತನಿಖೆ ಆರಂಭಿಸಿದ ಸಿಸಿಬಿ ಪೊಲೀಸರು ಶಾಲಿನಿ ಅಪಹರಣ ಹಾಗೂ ಕೊಲೆಗೆ ಮುನ್ನವೇ ಆರೋಪಿಗಳನ್ನ ಬಂಧಿಸಿದ್ದಾರೆ. ಪತಿ ಸಿದ್ಧಾರ್ಥ್, ರಂಜಿತ್ ಹಾಗೂ ಯೋಗೀಶ್ನನ್ನ ಬಂಧಿಸಿ, ನಡೆಯಬೇಕಿದ್ದ ಕೊಲೆ ತಪ್ಪಿಸಿದ್ದಾರೆ.
ಇದನ್ನೂ ಓದಿ: ಪ್ರಿಯಕರನೊಂದಿಗೆ ಲವ್ವಿಡವ್ವಿ.. ಪತಿಯ ಕೊಲೆಗೆ ಸುಪಾರಿ ನೀಡಿದ್ಲು ಅರ್ಧಾಂಗಿ: ಗಂಡ ಜೀವಂತ, ಲವರ್ ಆತ್ಮಹತ್ಯೆ