ಬೆಂಗಳೂರು : ಮೂರು ತಿಂಗಳ ಗರ್ಭಿಣಿ ಮೈಮೇಲೆ ಪತಿಯೇ ಡೀಸೆಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನ ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಡಾ.ಭೀಮಾಶಂಕರ ಗುಳೇದ್ ತಿಳಿಸಿದ್ದಾರೆ.
ಬಾಬು (37) ಎಂಬಾತ ಬಂಧಿತ ಆರೋಪಿ. ಕಾಕ್ಸ್‌ಟೌನ್ ದೊಡ್ಡಗುಂಟೆಯಲ್ಲಿ ವಾಸವಾಗಿದ್ದ ಮೀನಾಳನ್ನ (23) ಕೊಲೆ ಮಾಡಲು ಈತ ಯತ್ನಿಸಿದ್ದ. ಘಟನೆಯಿಂದ ಗಾಯಗೊಂಡಿದ್ದ ಗರ್ಭಿಣಿ ವಿಕ್ಟೋರಿಯಾ ಆಸತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ .
ಮರು ಮದುವೆಯಾಗಿದ್ದ ಮೀನಾ : ಏಳು ವರ್ಷದ ಹಿಂದೆ ವಿಜಯಕಾಂತನನ್ನು ವಿವಾಹವಾಗಿದ್ದ ಮೀನಾಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ದುರಾದೃಷ್ಟವಶಾತ್ ಮೂರು ವರ್ಷದ ಹಿಂದೆ ವಿಜಯಕಾಂತ್ ತೀರಿಹೋಗಿದ್ದರು. ನಂತರ ಮೀನಾಗೆ ಬಾಬು ಪರಿಚಯವಾಗಿತ್ತು. ಇಬ್ಬರು ಒಪ್ಪಿ ಮದುವೆಯಾಗಿ ಬೈಯಪ್ಪನಹಳ್ಳಿಯಲ್ಲಿ ಒಂದು ವರ್ಷದಿಂದ ವಾಸವಿದ್ದರು. ಆರಂಭದಲ್ಲಿ ಎಲ್ಲವೂ ಸರಿಯಾಗಿತ್ತು. ಕಾಲ ಕ್ರಮೇಣ ಕುಡಿತಕ್ಕೆ ದಾಸನಾದ ಬಾಬು, ಕೂಲಿ ಮಾಡಿ ಕೂಡಿಟ್ಟ ಹಣವನ್ನು ಕುಡಿದು ಹಾಳು ಮಾಡುತ್ತಿದ್ದ. ಈ ವಿಚಾರವಾಗಿ ದಂಪತಿ ನಡುವೆ ಜಗಳವಾಗುತ್ತಿತ್ತು.
ಡೀಸೆಲ್ ಸುರಿದು ಬೆಂಕಿ ಹಚ್ಚಿದ ಪಪಿ ಪತಿ : ಕಳೆದ ಮಾರ್ಚ್ 9ರಂದು ಕುಡಿದು ಹಣ ಖರ್ಚು ಮಾಡುವ ವಿಚಾರವಾಗಿ ದಂಪತಿ ನಡುವೆ ಜಗಳವಾಗಿದೆ. ಹಣ ಕೇಳಿದರೆ ಮೈಮೇಲೆ ಡೀಸೆಲ್ ಸುರಿದುಕೊಂಡು ಸತ್ತು ಹೋಗುತ್ತೇನೆ ಎಂದು ಮೀನಾ ಕೋಪದಲ್ಲಿ ಹೇಳಿದ್ದಾಳೆ. ಇದರಿಂದ ಆಕ್ರೋಶಗೊಂಡ ಬಾಬು, ನೀನ್ಯಾಕೆ ಸಾಯುತ್ತೀಯ?, ನಾನೇ ಸಾಯಿಸುವೆ ಎಂದು ಡೀಸೆಲ್ ಸುರಿದು ಬೆಂಕಿ ಹಚ್ಚಿ ಎಸ್ಕೇಪ್ ಆಗಿದ್ದಾನೆ.
ಹೆಣ್ಣುಮಗುವಿಗೆ ಕಚ್ಚಿ ವಿಕೃತಿ: ಮೂರು ತಿಂಗಳ ಗರ್ಭಿಣಿ ಆಗಿರುವ ಮೀನಾ ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೀನಾ ಮೊದಲ ಪತಿಗೆ ಜನಿಸಿದ್ದ ಪುಟ್ಟ ಹೆಣ್ಣು ಮಗುವನ್ನು ಆರೋಪಿ ಕಚ್ಚಿ ವಿಕೃತಿ ಮೆರೆದಿರುವುದು ಬೆಳಕಿಗೆ ಬಂದಿದೆ. ಪ್ರಕರಣ ದಾಖಲಿಸಿಕೊಂಡ ಬೈಯಪ್ಪನಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
ಇದನ್ನೂ ಓದಿ: 3 ತಿಂಗಳ ಗರ್ಭಿಣಿ ಪತ್ನಿ ಮೇಲೆ ಡೀಸೆಲ್ ಸುರಿದು ಬೆಂಕಿ ಹಚ್ಚಿದ ಕುಡುಕ