ಬೆಂಗಳೂರು: ಚಿನ್ನದ ವ್ಯಾಪಾರಿಯ ಮನೆಗೆ ನುಗ್ಗಿ ನಕಲಿ ಗನ್ ತೋರಿಸಿ, ಬೆದರಿಸಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಮೂವರು ಅಂತಾರಾಜ್ಯ ಕಳ್ಳರನ್ನ ಯಶವಂತಪುರ ಠಾಣಾ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಬಂಧಿತರನ್ನ ಉತ್ತರ ಪ್ರದೇಶ ಮೂಲದ ಅಮಿತ್, ರಾಜಸ್ಥಾನ ಮೂಲದ ಮುನಾವರ್ ಸಿಂಗ್ ಮತ್ತು ರಮೇಶ್ ಎಂದು ಗುರುತಿಸಲಾಗಿದೆ.
ಮಾರ್ಚ್ 15ರ ಮಧ್ಯಾಹ್ನ ಯಶವಂತಪುರದ ರಾಜೇಶ್ವರಿ ಸ್ಕೂಲ್ ಹತ್ತಿರದ ನಿವಾಸಿ ಕಮಲ್ ಸಿಂಗ್ ಎಂಬಾತನ ಮನೆಗೆ ನುಗ್ಗಿದ್ದ ಆರೋಪಿಗಳು ಮನೆಯಲ್ಲಿದ್ದ ಕಮಲ್ ಸಿಂಗ್, ಪತ್ನಿ, ಪುತ್ರಿ ಹಾಗೂ ತಾಯಿಗೆ ಗನ್ ತೋರಿಸಿ ಸುಮಾರು 15 ಗ್ರಾಂ ಚಿನ್ನಾಭರಣ ದೋಚಿದ್ದರು. ಬಳಿಕ ಕಮಲ್ ಸಿಂಗ್ ತಾಯಿಯ ಬಳಿಯಿದ್ದ ಮೊಬೈಲ್ ಕಿತ್ತುಕೊಳ್ಳಲು ಹೋದಾಗ ಪ್ರತಿರೋಧಿಸಿದ ಅವರ ಮಗಳ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದರು.
ಘಟನೆ ಬಗ್ಗೆ ಯಶವಂತಪುರ ಪೊಲೀಸ್ ಠಾಣೆಗೆ ಕಮಲ್ ಸಿಂಗ್ ಪುತ್ರಿ ನೀಡಿದ ದೂರಿನನ್ವಯ ತನಿಖೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ. ಅವರಿಂದ 1 ಚಿನ್ನದ ಕಿವಿಯೋಲೆ, ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ನಕಲಿ ಗನ್ ಅನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮತ್ತೋರ್ವ ಆರೋಪಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ಓದಿ: ಬೆಂಗಳೂರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ರಕರ್ತೆ ಮೃತದೇಹ ಪತ್ತೆ.. ಪತಿ ಮೇಲೆ ಗುಮಾನಿ