ಬೆಂಗಳೂರು : ನಟ ಹಾಗೂ ನಿರೂಪಕ ಮಾಸ್ಟರ್ ಆನಂದ್ ಪುತ್ರಿ ವಂಶಿಕ ಹೆಸರು ಬಳಸಿ ನಟನೆ ಮಕ್ಕಳ ಪೋಟೋಶೂಟ್ ಮಾಡಿಸಲು ಪೋಷಕರಿಂದ ಹಣ ಪಡೆದು ಮಹಿಳೆಯೊಬ್ಬರು ಮೋಸ ಮಾಡುತ್ತಿದ್ದ ಆರೋಪ ಕೇಳಿ ಬಂದಿದೆ. ಈ ಕುರಿತು ಆನಂದ್ ಪತ್ನಿ ಯಶಸ್ವಿನಿ ಆನಂದ್ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ನಿಶಾ ನರಸಪ್ಪ ಎಂಬುವರ ವಿರುದ್ಧ ದೂರು ನೀಡಲಾಗಿದೆ. ಆ್ಯಡ್ ಶೂಟ್, ಕಾರ್ಯಕ್ರಮಗಳು, ಮಕ್ಕಳ ಟ್ಯಾಲೆಂಟ್ ಶೋ, ಖಾಸಗಿ ಚಾನಲ್ನಲ್ಲಿ ಟ್ಯಾಲೆಂಟ್ ಶೋ ನಲ್ಲಿ ಚಾನ್ಸ್ ಕೊಡಿಸೋದಾಗಿ ನೂರಾರು ಪೋಷಕರಿಗೆ ಮೋಸ ಮಾಡಿರೋದಾಗಿ ಆರೋಪ ಕೇಳಿ ಬಂದಿದೆ. ಪೋಷಕರಿಂದ ಲಕ್ಷಾಂತರ ರೂ. ಗಳನ್ನು ಪಡೆದು ನಿಶಾ ನರಸಪ್ಪ ಎಂಬ ಮಹಿಳೆ ವಂಚನೆ ಮಾಡಿದ್ದಾರೆಂದು ಯಶಸ್ವಿನಿ ಆರೋಪಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಆನಂದ್ ಪತ್ನಿ ಯಶಸ್ವಿನಿ ಆನಂದ್, ’’ನಿಶಾ ಎಂಬವವರು ನನಗೆ ಇನ್ಸ್ಟಾಗ್ರಾಂನಲ್ಲಿ ಪರಿಚಯ. ಮುಂಚೆ ಯಾವುದೋ ಒಂದು ಕಾರ್ಯಕ್ರಮಕ್ಕೆ ನಮ್ಮ ಮಗಳು ಜನಪ್ರಿಯತೆ ನೋಡಿ ನಮ್ಮನ್ನು ಕರೆಸಿದ್ದರು. ನಾವು ತೀರ್ಪುಗಾರರಾಗಿ ಹೋಗುತ್ತಿದ್ದೆವು. ಈ ಸಂದರ್ಭದಲ್ಲಿ 2 ಬಾರಿ ನಮ್ಮ ಮಗಳನ್ನು ಕರೆದುಕೊಂಡು ಹೋಗಿದ್ದು, ಇನ್ನುಳಿದ ನಾಲ್ಕು ಬಾರಿ ನಾನೇ ಹೋಗಿದ್ದೇನೆ. ಬಳಿಕ ನನಗೆ ಇನ್ಸ್ಟಾಗ್ರಾಂನಲ್ಲಿ ಬ್ಯಾಡ್ ಕಮೆಂಟ್ಸ್ ಬರುವುದಕ್ಕೆ ಶುರು ಆದ ಮೇಲೆ ನಿಶಾಳಿಗೆ ಈ ಬಗ್ಗೆ ತಿಳಿಸಿ ಎಲ್ಲ ಸರಿಯಾಗುವವರೆಗೆ ನನ್ನನ್ನು ಕರೆಯಬೇಡ ಎಂದು ಎಚ್ಚರಿಕೆ ಕೊಟ್ಟಿದೆ.
ನಂತರ ಹಣ ಕೊಟ್ಟು ಪೋಷಕರು ಮೋಸ ಹೋಗುತ್ತಿದ್ದಾರೆ ಎಂದು ಗೊತ್ತಾಯಿತು. ಹೀಗಾಗಿ ಸಮಾಜದ ಮೇಲೆ ನಮ್ಮ ಜವಾಬ್ದಾರಿ ಇರುವುದರಿಂದ ನೇರವಾಗಿ ಪೊಲೀಸ್ ಠಾಣೆಗೆ ಬಂದು ದೂರು ಸಲ್ಲಿಸಿದ್ದೇನೆ. ಇನ್ನು ಮುಂದೆ ಈ ತರಹದ ಆಮಿಷಗಳಿಂದ ಮೋಸವಾಗದೇ ಪೋಷಕರು ಎಚ್ಚೆತ್ತು ಕೊಳ್ಳಬೇಕು ಎಂದು ಮನವಿ ಮಾಡಿದರು.
ಪೋಷಕರ ವಿರುದ್ಧ ಪ್ರತಿ ದೂರು ನೀಡಿರುವ ನಿಶಾ ನರಸಪ್ಪ: ಮತ್ತೊಂದೆಡೆ ಫೋಟೊ ಶೂಟ್ ಆರ್ಡರ್ ಕೊಡೋದಾಗಿ ನಿಶಾ ನರಸಪ್ಪ ಅವರನ್ನ ಕಾಫಿ ಡೇ ಗೆ ಕರೆಸಿದ್ದ ಪೋಷಕರು ಆ ಬಳಿಕ ಸದಾಶಿವನಗರ ಪೊಲೀಸರಿಗೆ ನಿಶಾರನ್ನು ಒಪ್ಪಿಸಿದ್ದಾರೆ. ನಿಶಾ ನರಸಪ್ಪ ವಿರುದ್ಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಇನ್ನು ಪೋಷಕರ ವಿರುದ್ಧವೂ ನಿಶಾ ಪ್ರತಿದೂರು ನೀಡಿದ್ದಾರೆ. ಕಾಫಿ ಶಾಪ್ನಲ್ಲಿ ಪೋಷಕರು ನನ್ನ ಮೇಲೆ ಗಲಾಟೆ ಮಾಡಿದ್ದಾರೆ. ನಾನು ಯಾರಿಗೂ ಮೋಸ ಮಾಡಿಲ್ಲ. ಹಣ ಕೊಡುವುದು ತಡವಾಗಿದೆ ಎಂದು ನಿಶಾ ಪ್ರತಿದೂರಿನಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಕಳೆದ ಜೂನ್ ತಿಂಗಳು ಅಭಿಮಾನಿ ಎಂದು ಪರಿಚಯವಾದ ಉದ್ಯಮಿಯೊಬ್ಬರಿಂದ ನಟ ಮಾಸ್ಟರ್ ಆನಂದ್ಗೆ 18.5 ಲಕ್ಷ ರೂ. ವಂಚಿಸಿದ ಪ್ರಕರಣ ಚಂದ್ರಾಲೇಔಟ್ ಠಾಣೆಯಲ್ಲಿ ದಾಖಲಾಗಿತ್ತು. ನಿವೇಶನ ನೀಡುವುದಾಗಿ ನಂಬಿಸಿ 2020ರ ಸೆಪ್ಟೆಂಬರ್ ನಿಂದ 2021ರ ಅಕ್ಟೋಬರ್ ಅವಧಿಯಲ್ಲಿ 18.5 ಲಕ್ಷ ರೂ. ಹಣ ಪಡೆದು ವಂಚಿಸಿದ್ದಾರೆಂದು ಮಲ್ಟಿ ಲೀಪ್ ವೆಂಚರ್ಸ್ ಕಂಪನಿಯ ಸುಧೀರ್ ಹಾಗೂ ಅವರ ಆಪ್ತ ಸಹಾಯಕಿ ಮನಿಕಾ ಎಂಬುವರ ವಿರುದ್ಧ ನಟ ದೂರು ನೀಡಿದ್ದರು.
ಇದನ್ನೂ ಓದಿ : ನಿವೇಶನ ಮಾರಾಟ ಹೆಸರಿನಲ್ಲಿ ನಟ ಮಾಸ್ಟರ್ ಆನಂದ್ಗೆ ವಂಚನೆ - ದೂರು ದಾಖಲು