ಬೆಂಗಳೂರು: ನಗರದ ಥಣಿಸಂದ್ರ ಮುಖ್ಯರಸ್ತೆಯ ಗುಂಡಿಯಲ್ಲಿ ಸ್ಕೂಟರ್ ಸವಾರ ಅಜಿಂ ಅಹ್ಮದ್ ಎಂಬುವವರು ಬಿದ್ದಿದ್ದು, ಅವರ ಮೇಲೆ ಗೂಡ್ಸ್ ವಾಹನ ಚಲಿಸಿ ಹೋದ ಪರಿಣಾಮ ಮೃತಪಟ್ಟಿದ್ದಾರೆ.
ಕಳೆದ ತಿಂಗಳು 27 ರಂದು ಮಧ್ಯಾಹ್ನ 1-30 ಗಂಟೆಯ ಸಮಯದಲ್ಲಿ ಈ ಅಪಘಾತ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ರಸ್ತೆ ಕಾಮಗಾರಿ ಉಸ್ತುವಾರಿಯಾಗಿದ್ದ ಬಿಬಿಎಂಪಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸವಿತಾ ಅವರನ್ನು ಪ್ರಮುಖ ಆರೋಪಿಯನ್ನಾಗಿಸಿ ಎಫ್ಐಆರ್ ದಾಖಲಿಸಲಾಗಿದೆ.
ಗೂಡ್ಸ್ ವಾಹನ ಚಾಲಕನಾದ ರಾಮಸ್ವಾಮಿಯನ್ನು ಪ್ರಕರಣದ 2ನೇ ಆರೋಪಿಯನ್ನಾಗಿ ಪರಿಗಣಿಸಲಾಗಿದೆ. ಗುತ್ತಿಗೆದಾರರನ್ನು ಪ್ರಕರಣದ 3ನೇ ಆರೋಪಿಯನ್ನಾಗಿ ಪರಿಗಣಿಸಲಾಗಿದೆ.
ಮೃತಪಟ್ಟ ಅಜಿಂ ಅಹ್ಮದ್, ತನ್ನ ವಾಹನವನ್ನು ಥಣಿಸಂದ್ರ ಕಡೆಯಿಂದ ಹೆಗಡೆ ನಗರದ ಕಡೆಗೆ ಚಾಲನೆ ಮಾಡಿಕೊಂಡು ಹೋಗುತ್ತಿದ್ದರು. ಇದೇ ರಸ್ತೆಯ ಪ್ರಕಾಶ್ ಹಾರ್ಡ್‌ವೇರ್ ಮತ್ತು ಎಲೆಕ್ಟ್ರಿಕಲ್ ಶಾಪ್ ಮುಂಭಾಗದ ರಸ್ತೆಯ ಎಡಭಾಗದಲ್ಲಿ ಬಿದ್ದಿದ್ದ ಗುಂಡಿಯನ್ನು ಗಮನಿಸದೇ ವಾಹನವನ್ನು ಇಳಿಸಿದ್ದರಿಂದ, ನಿಯಂತ್ರಣ ತಪ್ಪಿ ಸ್ಕೂಟರ್ ಸಮೇತನಾಗಿ ರಸ್ತೆಯ ಮೇಲೆ ಬಿದ್ದಿದ್ದಾರೆ.
ಅದೇ ಸಮಯಕ್ಕೆ ರಸ್ತೆಯ ಅದೇ ದಿಕ್ಕಿನಿಂದ ಬಂದ ಗೂಡ್ಸ್ ವಾಹನದ ಚಾಲಕ, ಸ್ಕೂಟರ್ ಸವಾರನ ತೊಡೆಯ ಮೇಲೆ ವಾಹನವನ್ನು ಚಲಾಯಿಸಿದ್ದಾನೆ. ಪರಿಣಾಮ, ಸವಾರನ ತೊಡೆ ಮತ್ತು ಬಲಗೈಗೆ ತೀವ್ರವಾದ ಗಾಯಗಳಾಗಿವೆ.
ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹತ್ತಿರದ ಸುರಕ್ಷಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ಈ ಸಂಬಂಧ ಬಾಣಸವಾಡಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಓದಿ: ಗುಂಡ್ಲುಪೇಟೆ: ಸ್ನೇಹಿತ ಚುಚ್ಚಿದ ಚಾಕು ಸಮೇತ ಯುವಕ ಆಸ್ಪತ್ರೆಗೆ ದಾಖಲು