ಯಲಹಂಕ: ಅವೈಜ್ಞಾನಿಕ ರಸ್ತೆ ಮತ್ತು ಫ್ಲೈ ಓವರ್ಗಳಿಂದ ಬೆಂಗಳೂರು ನಗರದಲ್ಲಿ ರಸ್ತೆ ಅಪಘಾತಗಳ ಸಾವು ಪ್ರಕರಣ ದಾಖಲಾಗುತ್ತಿವೆ. 2022 ರ 10 ತಿಂಗಳ ಅವಧಿಯಲ್ಲಿ ರಸ್ತೆ ಅಪಘಾತಗಳಿಂದ 577 ಜನರು ಸಾವನ್ನಪ್ಪಿದ್ದಾರೆ. ಮೊದಲ ಸ್ಥಾನದಲ್ಲಿರುವ ಯಲಹಂಕ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಸ್ತೆ ಅಪಘಾತದಲ್ಲಿ 40 ಜನರು ಸಾವನ್ನಪ್ಪಿದ್ದಾರೆ. ಆದರೆ, ಹಿಂದಿನ ವರ್ಷಕ್ಕೆ ಹೋಲಿಸಿದರೆ ನೂರು ಅಪಘಾತಗಳು ಕಡಿಮೆ ಆಗಿದೆ.
ರಸ್ತೆಯಲ್ಲಿರುವ ಗುಂಡಿಗಳಿಂದ ಬೈಕ್ ಸವಾರರು ಬಿದ್ದು ಪ್ರಾಣ ಕಳೆದುಕೊಳ್ಳುತ್ತಿರುವ ಬಗ್ಗೆ ಬೆಂಗಳೂರು ನಗರ ಸುದ್ದಿಯಾಗುತ್ತಲೇ ಇದೆ. ಅತಿ ವೇಗ, ಅವೈಜ್ಞಾನಿಕ ರಸ್ತೆಗಳು ಮತ್ತು ಫ್ಲೈ ಓವರ್ಗಳಿಂದ ಬೆಂಗಳೂರು ನಗರದಲ್ಲಿ ರಸ್ತೆ ಅಪಘಾತಗಳ ಸಾವು ಪ್ರಕರಣಗಳಿಗೆ ಕಾರಣವಾಗುತ್ತಿದೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ 40 ಸಂಚಾರಿ ಪೊಲೀಸ್ ಠಾಣೆಗಳಿದ್ದು, ವಾಹನ ದಟ್ಟನೆ ನಿಯಂತ್ರಣ ಮತ್ತು ರಸ್ತೆ ಅಪಘಾತಗಳಿಗ ಕಡಿವಾಣ ಹಾಕುವ ಕೆಲಸ ಮಾಡಲಾಗುತ್ತಿದೆ.
2022ರ ಜನವರಿಯಿಂದ ಆಕ್ಟೋಬರ್ ವರೆಗಿನ 10 ತಿಂಗಳ ಅವಧಿಯಲ್ಲಿ ನಡೆದ ರಸ್ತೆ ಅಪಘಾತದಿಂದ 577 ಜನರ ಸಾವಾಗಿದೆ. ಯಲಹಂಕ ಸಂಚಾರಿ ಪೊಲೀಸ್ ಠಾಣೆಯಲ್ಲಿ 40 ಸಾವು ಪ್ರಕರಣ ದಾಖಲಾಗುವ ಮೂಲಕ ಯಲಹಂಕ ಮೊದಲ ಸ್ಥಾನದಲ್ಲಿದೆ. ಪಕ್ಕದಲ್ಲಿಯೇ ಇರುವ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 38 ಸಾವಿನ ಪ್ರಕರಣ ದಾಖಲಾಗಿದ್ದು, ಎರಡನೇ ಸ್ಥಾನದಲ್ಲಿದೆ. ಕಾಮಾಕ್ಷಿಪಾಳ್ಯದಲ್ಲಿ 37, ಕೆಂಗೇರಿ 30, ಕೆಎಸ್ ಲೇಔಟ್‌ನಲ್ಲಿ 28, ಪೀಣ್ಯಾದಲ್ಲಿ 26, ದೇವನಹಳ್ಳಿಯಲ್ಲಿ 24 ರಸ್ತೆ ಅಪಘಾತಗಳು ವರದಿಯಾಗಿವೆ.
2021ರಲ್ಲಿ ಬೆಂಗಳೂರು ನಗರದಲ್ಲಿ 675 ರಸ್ತೆ ಅಪಘಾತ ಸಾವುಗಳು ವರದಿಯಾಗಿದೆ, ಕಳೆದ ವರ್ಷ ಯಲಹಂಕದಲ್ಲಿ 52, ಕೆಎಸ್ ಲೇಔಟ್ 48 ಮತ್ತು ಚಿಕ್ಕಜಾಲದಲ್ಲಿ 40 ರಸ್ತೆ ಅಪಘಾತಗಳ ಸಾವು ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ ಸಹ ಯಲಹಂಕ ಮೊದಲ ಸ್ಥಾನದಲ್ಲಿದ್ದಾರೆ ಚಿಕ್ಕಜಾಲ ಮೂರನೇ ಸ್ಥಾನದಲ್ಲಿತ್ತು.
ಯಲಹಂಕ ಮತ್ತು ಚಿಕ್ಕಜಾಲದಲ್ಲಿ ಅಪಘಾತ ಹೆಚ್ಚಾಗಲು ಕಾರಣ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ಇಲ್ಲಿ ವಿಮಾನ ನಿಲ್ದಾಣಕ್ಕೆ ಹೋಗಲಿರುವ ಹೈವೆ ಇರುವುದರಿಂದ ವೇಗವಾದ ವಾಹನ ಪ್ರಯಾಣ ಪ್ರಾಣಕ್ಕೆ ಕುತ್ತು ತರುತ್ತಿದೆ.
ಇದನ್ನೂ ಓದಿ: ಬಂಡೀಪುರದಲ್ಲಿ ಲಾರಿ ಡಿಕ್ಕಿಯಾಗಿ ಹೆಣ್ಣಾನೆ ಸಾವು: ಪರಿಸರವಾದಿಗಳ ಆಕ್ರೋಶ