ಬೆಂಗಳೂರು: ಶಾಸಕ ಜಮೀರ್ ಅಹ್ಮದ್ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ಕಲೆ ಹಾಕುತ್ತಿದ್ದಾರೆ. ನಗರದ 5 ಕಡೆಗಳಲ್ಲಿ 40ಕ್ಕೂ ಹೆಚ್ಚು ಅಧಿಕಾರಿಗಳ ತಂಡ ಶೋಧ ಕಾರ್ಯಾಚರಣೆ ನಡೆಸುತ್ತಿದೆ. ಆದಾಯ ಮೀರಿದ ಆಸ್ತಿ ಗಳಿಕೆ ಆರೋಪ ಶಾಸಕರ ಮೇಲಿದೆ.
ನಿನ್ನೆಯಷ್ಟೇ ಎಸಿಬಿ ಬೆಂಗಳೂರು ಮಾಜಿ ಜಿಲ್ಲಾಧಿಕಾರಿ ಜೆ.ಮಂಜುನಾಥ್ರನ್ನು ಬಂಧಿಸಿ ಜೈಲಿಗಟ್ಟಿತ್ತು. ಮರುದಿನವೇ ಶಾಸಕ ಜಮೀರ್ ಮನೆ ಮೇಲೆ ಎಸಿಬಿ ರೈಡ್ ಮಾಡಿದೆ. ಜಮೀರ್ ನಿವಾಸಗಳ ಮೇಲೆ ಕಳೆದ ವರ್ಷ ಜಾರಿ ನಿರ್ದೇಶನಾಲಯ(ಇಡಿ) ದಾಳಿ ನಡೆಸಿತ್ತು. ಈ ವರದಿಯನ್ನು ಎಸಿಬಿಗೂ ಕಳುಹಿಸಿತ್ತು. ಇದರ ಆಧಾರದ ಮೇರೆಗೆ ಇಂದು ಬೆಳಗ್ಗೆ ದಾಳಿ ನಡೆಸಲಾಗಿದೆ.
ಎಲ್ಲೆಲ್ಲಿ ದಾಳಿ?: ಬಹುಕೋಟಿ ಹಗರಣವಾದ ಐಎಂಎ ಪ್ರಕರಣದಲ್ಲಿ ಇಡಿ ನಿರ್ದೇಶನದ ಮೇರೆಗೆ ಕಂಟೋನ್ಮೆಂಟ್ನಲ್ಲಿರುವ ಜಮೀರ್ ಅಹಮದ್ ಖಾನ್ ನಿವಾಸ, ಸಿಲ್ವರ್ ಓಕ್ ಅಪಾರ್ಟ್ಮೆಂಟ್, ಸದಾಶಿವನಗರದಲ್ಲಿರುವ ಗೆಸ್ಟ್ ಹೌಸ್, ಬನಶಂಕರಿಯಲ್ಲಿರುವ ಜಿ.ಕೆ ಅಸೋಸಿಯೇಟ್ಸ್ ಕಚೇರಿ ಹಾಗೂ ಕಲಾಸಿಪಾಳ್ಯದಲ್ಲಿರುವ ನ್ಯಾಷನಲ್ ಟ್ರಾವೆಲ್ಸ್ ಕಚೇರಿ ಮೇಲೆ ಎಸಿಬಿ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದೆ.
ಇದನ್ನೂ ಓದಿ: 'ವರ್ಗಾವಣೆ ಬೆದರಿಕೆಗೆ ಬಗ್ಗಲ್ಲ': ಹೈಕೋರ್ಟ್ ನ್ಯಾಯಮೂರ್ತಿ ಹೆಚ್.ಪಿ.ಸಂದೇಶ್ ದಿಟ್ಟ ನುಡಿ