ಬೆಂಗಳೂರು: ಹೈಕೋರ್ಟ್ ಬೀಸಿದ ಚಾಟಿ ಬೆನ್ನಲ್ಲೇ ಎಚ್ಚೆತ್ತುಕೊಂಡಂತಿರುವ ಎಸಿಬಿ, ಇದೇ ಮೊದಲ ಬಾರಿಗೆ ಜನಪ್ರತಿನಿಧಿಯೊಬ್ಬರ ಮನೆ ಮೇಲೆ ದಾಳಿ ನಡೆಸಿದೆ. ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಜಮೀರ್ ಅಹಮದ್ ಮನೆ ಹಾಗೂ ಕಚೇರಿ ಸೇರಿದಂತೆ ಐದು ಕಡೆಗಳಲ್ಲಿ ಬೆಳ್ಳಂಬೆಳಗ್ಗೆ ಎಸಿಬಿ ದಾಳಿ ನಡೆಸಿದ್ದು, ಎಲ್ಲಾ ಕಡೆಗಳಲ್ಲಿ ಪರಿಶೀಲನೆ ಚುರುಕುಗೊಳಿಸಿದೆ.


ಕಲಾಸಿಪಾಳ್ಯದಲ್ಲಿರುವ ನ್ಯಾಷನಲ್ ಟ್ರಾವೆಲ್ಸ್ ಕಚೇರಿ ಹಾಗೂ ಹಿಂಭಾಗದಲ್ಲಿರುವ ಗೋಡೌನ್‌ನಲ್ಲಿದ್ದ ಬಂಡಲ್ಗಟ್ಟಲೇ ದಾಖಲಾತಿಗಳ ತಪಾಸಣೆ ಕೂಡ ನಡೆಯುತ್ತಿದೆ.

ಪ್ರತಿಭಟನೆ.. ಪೊಲೀಸ್ ಬಿಗಿ ಭದ್ರತೆ: ಎಸಿಬಿ ದಾಳಿ ವಿಚಾರ ಗೊತ್ತಾಗುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಜಮೀರ್ ಬೆಂಬಲಿಗರು ಮನೆ ಬಳಿ ಬಂದು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಎಸಿಬಿ ದಾಳಿ ರಾಜಕೀಯ ಪ್ರೇರಿತವಾಗಿದೆ ಎಂದು ಆರೋಪಿಸಿ ಬಿಜೆಪಿ ವಿರುದ್ಧ ತಂಡೋಪತಂಡವಾಗಿ ಬಂದು ಪ್ರತಿಭಟನೆ ನಡೆಸಿದರು. ಜನರ ಜಮಾವಣೆ ಹೆಚ್ಚಾಗುತ್ತಿದ್ದಂತೆ ಪೊಲೀಸರು ಜನರನ್ನು ಚದುರಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಸದ್ಯ ನಿರ್ಮಾಣವಾಗಿರುವ ಮನೆ ಮೌಲ್ಯ, ಇಂಟೀರಿಯರ್ ವರ್ಕ್, ದುಬಾರಿ ವುಡ್ ವರ್ಕ್, ಗ್ರಾನೈಟ್, ಐಷಾರಾಮಿ ಕುರ್ಚಿಯ ಮೌಲ್ಯಗಳನ್ನು ಎಸಿಬಿ ಅಧಿಕಾರಿಗಳು ಲೆಕ್ಕ ಹಾಕುತ್ತಿದ್ದಾರೆ. ಚಿನ್ನಾಭರಣ ಲೆಕ್ಕ ಹಾಕಲು ಅಕ್ಕಸಾಲಿಗರನ್ನು ಸ್ಥಳಕ್ಕೆ ಎಸಿಬಿ ಕರೆಯಿಸಿಕೊಂಡಿದೆ.
ತಿಂಡಿ ತರ್ತೀನಿ.. ಎಸಿಬಿಯವ್ರು ಅವರ ಡ್ಯೂಟಿ ಅವರು ಮಾಡ್ತಿದಾರೆ.. ದಾಳಿ ಸಂಬಂಧ ಜಮೀರ್ ಸಹೋದರ ಶಕೀಲ್ ಪ್ರತಿಕ್ರಿಯಿಸಿ, "ತಿಂಡಿ ತರಲು ಹೋಗ್ತಿದ್ದೇನೆ. ಎಸಿಬಿಯವರು ಅವರ ಡ್ಯೂಟಿ ಮಾಡ್ತಿದ್ದಾರೆ. ಎಲ್ಲವೂ ಬಿಜೆಪಿ ನಡೆಸುತ್ತಿರುವ ಷಡ್ಯಂತ್ರವಾಗಿದೆ. ಇದಕ್ಕೂ ಮೊದಲು ಇಡಿಯವರು ಬಂದಿದ್ದರು. ರೇಡ್ ಮಾಡಿ ಪರಿಶೀಲನೆ ಮಾಡಿದ್ದರು. ನಾವು ನಮ್ಮ ಪಾಡಿಗೆ ಸರಿಯಾಗೇ ಇದ್ದೇವೆ. ಎಸಿಬಿ ಅವರ ಕೆಲಸ ಮಾಡ್ತಿದ್ದಾರೆ. ಅವರನ್ನ ಬ್ಲೇಮ್ ಮಾಡಲ್ಲ. ಬಿಜೆಪಿಯವರ ಮನೆ ಮೇಲೆ ರೇಡ್ ಆಗ್ತಿದ್ಯಾ ಹೇಳಿ." ಎಂದು ಪ್ರಶ್ನಿಸಿದರು.