ಬೆಂಗಳೂರು: ಬಸವನಗುಡಿ ರಸ್ತೆಯ ನೆಟ್ಟಕಲ್ಲಪ್ಪ ಸರ್ಕಲ್ನಲ್ಲಿರುವ ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್ ಅವ್ಯವಹಾರ ಪ್ರಕರಣ ಸಂಬಂಧ ಬ್ಯಾಂಕ್ನಿಂದ ಹೆಚ್ಚು ಸಾಲ ಪಡೆದಿದ್ದ ಗ್ರಾಹಕರ ಮನೆಗಳ ಮೇಲೂ ಎಸಿಬಿ ದಾಳಿ ನಡೆಸಿದೆ.
4 ದಿನಗಳ ಹಿಂದೆ ಬ್ಯಾಂಕ್ ಆಡಳಿತಾಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ ನಡೆಸಿತ್ತು. ದಾಳಿ ವೇಳೆ ಬ್ಯಾಂಕಿನ ಅಧಿಕಾರಿ ಹಾಗೂ ಸಿಬ್ಬಂದಿ ಸೇರಿ 1,400 ಕೋಟಿ ರೂಪಾಯಿ ಹಣದ ಅವ್ಯವಹಾರ ನಡೆಸಿರುವುದು ಕಂಡು ಬಂದಿತ್ತು. ಅಲ್ಲದೆ 150 ಕೋಟಿ ಹಣವನ್ನು 60 ಮಂದಿ ಕಾಲ್ಪನಿಕ ಗ್ರಾಹಕರಿಗೆ ಮಂಜೂರು ಮಾಡಿರುವುದು ಬೆಳಕಿಗೆ ಬಂದಿತ್ತು. ಈ ಸಂಬಂಧ ಬ್ಯಾಂಕಿನಿಂದ ಹೆಚ್ಚು ಸಾಲ ಪಡೆದಿರುವ ಗ್ರಾಹಕರಾದ ರಘುನಾಥ್, ಜಸ್ವಂತ್ ಸಿಂಗ್ ಹಾಗೂ ರಾಮಕೃಷ್ಣ ಎಂಬುವರ ಮನೆಗಳ ಮೇಲೆ ಎಸಿಬಿ ದಾಳಿ ನಡೆಸಿ ಮಹತ್ವದ ದಾಖಲಾತಿ ಪತ್ರ ಜಪ್ತಿ ಮಾಡಿ ಪರಿಶೀಲನೆ ನಡೆಸಿದೆ.
ಯಶವಂತಪುರದಲ್ಲಿ ಮನೆ ಮಾಡಿಕೊಂಡಿರುವ ರಘುನಾಥ್ ಬ್ಯಾಂಕ್ನಿಂದ 140 ಕೋಟಿ ಸಾಲ ಪಡೆದಿದ್ದರು. ಅದೇ ರೀತಿ ಹೆಚ್.ಬಿ.ಆರ್. ಲೇಔಟ್ನ ಜಸ್ವಂತ್ ಸಿಂಗ್ 150 ಕೋಟಿ ಹಾಗೂ ಚಿಕ್ಕಲ್ಲಸಂದ್ರದಲ್ಲಿರುವ ರಾಮಕೃಷ್ಣ ಎಂಬುವರು 40 ಕೋಟಿ ಸಾಲ ಪಡೆದಿದ್ದರಂತೆ. ಈ ಹಿನ್ನೆಲೆ ಎಸಿಪಿ ಎಸ್ಪಿ ಅಬ್ದುಲ್ ಅಹ್ಮದ್ ನೇತೃತ್ವದಲ್ಲಿ ದಾಳಿ ನಡೆಸಿ ತನಿಖೆ ನಡೆಸುತ್ತಿದ್ದಾರೆ.
ಬ್ಯಾಂಕ್ ಆಡಳಿತ ಮಂಡಳಿ ಆರ್ಥಿಕ ಅಪರಾಧ ನಡೆಸಿದ ಆರೋಪದಡಿ RBI ನೋಟಿಸ್ ನೀಡಿದ ಪರಿಣಾಮ ಬ್ಯಾಂಕ್ ವಹಿವಾಟು ಸ್ಥಗಿತಗೊಳಿಸಿತ್ತು. ಇದರಿಂದ ಸಾವಿರಾರು ಠೇವಣಿದಾರರು ಬ್ಯಾಂಕಿನಿಂದ ಹಣ ವಿತ್ ಡ್ರಾ ಮಾಡಲು ಸಾಧ್ಯವಾಗಿರಲಿಲ್ಲ. ನಿನ್ನೆ ಹೊರಡಿಸಿದ ಆರ್ಬಿಐ ಪರಿಷ್ಕೃತ ಆದೇಶದಲ್ಲಿ ಹಿರಿಯ ನಾಗರಿಕರಿಗೆ 1 ಲಕ್ಷ ಹಾಗೂ ಉಳಿದ ಗ್ರಾಹಕರಿಗೆ 35 ಸಾವಿರ ರೂಪಾಯಿ ಒಂದು ಬಾರಿ ವಿತ್ ಡ್ರಾ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ.