ಬೆಂಗಳೂರು: ಬಿಬಿಎಂಪಿ ಕಂದಾಯ, ಟಿಡಿಆರ್ ಹಾಗೂ ಜಾಹೀರಾತು ವಿಭಾಗಗಳಲ್ಲಿನ ಇನ್ನಷ್ಟು ಅಕ್ರಮಗಳಿಗೆ ಸಂಬಂಧಿಸಿದ ಸಾಕ್ಷ್ಯಗಳು ಭ್ರಷ್ಟಾಚಾರ ನಿಗ್ರಹದಳದ (ಎಸಿಬಿ) ಕೈಸೇರಿದ್ದು, ಅವ್ಯವಹಾರದಲ್ಲಿ ಶಾಮೀಲಾಗಿರುವ ಅಧಿಕಾರಿಗಳಿಗೆ ನೋಟಿಸ್ ನೀಡಲು ಸಿದ್ಧತೆ ನಡೆಯುತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಬಿಬಿಎಂಪಿ ಕಚೇರಿಗಳ ಮೇಲೆ ಎಸಿಬಿ ಫೆಬ್ರವರಿ 25 ರಂದು ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪರಿಶೀಲಿಸಿದಾಗ ಸಾವಿರ ಕೋಟಿ ರೂ. ಗಳಿಗೂ ಅಧಿಕ ಭ್ರಷ್ಟಾಚಾರ ನಡೆದಿರುವುದು ಪತ್ತೆಯಾಗಿತ್ತು.
ಜಪ್ತಿ ಮಾಡಿರುವ ಕಡತ ಹಾಗೂ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದ್ದು, ಇನ್ನಷ್ಟು ಅಕ್ರಮಗಳು ಪತ್ತೆಯಾಗಿವೆ. ಭ್ರಷ್ಟ ಅಧಿಕಾರಿಗಳ ಜತೆಗೆ ತೆರಿಗೆ ವಂಚಿಸಿರುವ ಹಲವು ಮಾಲ್ಗಳು ಹಾಗೂ ಬಹುರಾಷ್ಟ್ರೀಯ ಕಂಪನಿಗಳಿಗೂ ನೋಟಿಸ್ ನೀಡುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: 'ಸಬಲಾ' ಮೂಲಕ ನೂರಾರು ಮಹಿಳೆಯರಿಗೆ ಅನ್ನದಾತೆಯಾದ ಮಲ್ಲಮ್ಮ ಯಾಳವಾರ
ಎ ಜೋನ್‌ನಲ್ಲಿ ಅತ್ಯಧಿಕ ತೆರಿಗೆ ವಸೂಲಿ ಆಗುತ್ತದೆ. ಆದರೆ, ಇಂತಹ ಕಡೆ 'ಸಿ' ಜೋನ್‌ಮಾದರಿಯ ತೆರಿಗೆ ವಸೂಲಿ ಮಾಡಿರುವುದು ಗೊತ್ತಾಗಿದೆ. ಹಲವು ವರ್ಷಗಳಿಂದ ತೆರಿಗೆ ವಸೂಲಿಯಲ್ಲಿ ಅಕ್ರಮಗಳು ನಡೆದಿವೆ ಎನ್ನಲಾಗಿದೆ.
ದೂರುಗಳ ಮಹಾಪೂರ: ಹಲವು ದಿನಗಳು ನಡೆದ ಎಸಿಬಿ ದಾಳಿಯ ಬಳಿಕ ಪಾಲಿಕೆಯ ಅಧಿಕಾರಿಗಳ ವಿರುದ್ಧ ಎಸಿಬಿಗೆ ನೂರಾರು ದೂರುಗಳ ಮಹಾಪೂರವೇ ಹರಿದು ಬರುತ್ತಿವೆ. ಮುಖ್ಯವಾಗಿ ಎಸಿಬಿ ಕಚೇರಿಗೆ ಬಿಬಿಎಂಪಿಯ ಟಿ.ಡಿ.ಆರ್, ಡಿ.ಆರ್.ಸಿ ಗೆ ಸಂಬಂಧಿಸಿದ ದೂರುಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿದೆ.
ಎಸಿಬಿ ಇದೀಗ 2018 ರಿಂದ 2022 ರವರೆಗಿನ ತೆರಿಗೆ ವಂಚನೆ ಸಂಬಂಧ ಮಾಹಿತಿ ಕಲೆ ಹಾಕುತ್ತಿದೆ. ಟ್ಯಾಕ್ಸ್ ವಿಭಾಗದಲ್ಲೇ ಸಾವಿರಾರು ಕೋಟಿಯಷ್ಟು ತೆರಿಗೆ ವಂಚನೆಯಾಗಿರುವ ಮಾಹಿತಿ ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ಟೌನ್ ಪ್ಲ್ಯಾನಿಂಗ್ ಹಾಗೂ ಟ್ಯಾಕ್ಸ್ ವಿಭಾಗವನ್ನು ಒಗ್ಗೂಡಿಸಿ ಕಡತಗಳನ್ನು ಪರಿಶೀಲಿಸಲು ಎಸಿಬಿ ಮುಂದಾಗಿದೆ. ಅದರಲ್ಲೂ 10 ಅಂತಸ್ತಿಗಿಂತ ಹೆಚ್ಚು ಅಂತಸ್ತುಗಳಿರುವ ಕಟ್ಟಡಗಳನ್ನೇ ಮುಖ್ಯವಾಗಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಮಾರತ್ತಹಳ್ಳಿ, ವೈಟ್ ಫೀಲ್ಡ್, ಹೆಚ್ ಎಸ್ ಆರ್ ಲೇಔಟ್, ಮಹದೇವಪುರ, ಬೊಮ್ಮನಹಳ್ಳಿ ಭಾಗದಲ್ಲೇ ದೊಡ್ಡ ದೊಡ್ಡ ಕಟ್ಟಡಗಳ ಮಾಲೀಕರು ತೆರಿಗೆ ವಂಚನೆ ಮಾಡಿರುವುದು ಸಹ ಬೆಳಕಿಗೆ ಬಂದಿದೆ.