ಬೆಂಗಳೂರು: ರಾಜ್ಯದಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚನೆಯಾದ ಮೇಲೆ, ಪ್ರತಿ ಸರ್ಕಾರಿ ಇಲಾಖೆಯಲ್ಲೂ ಎಸಿಬಿ ಕಚೇರಿ ಅಥವಾ ಜಾಗೃತ ಕೋಶ ಹಾಗೂ ಜಾಗೃತ ಸಲಹಾ ಮಂಡಳಿ ರಚನೆ ಮಾಡಬೇಕೆಂಬ ಸರ್ಕಾರಿ ನಡಾವಳಿ ಇದೆ. ಆದರೆ ಈವರೆಗೂ ಬಿಬಿಎಂಪಿ, ಬಿಡಿಎ ಕಚೇರಿಗಳಲ್ಲಿ ಈ ಜಾಗೃತ ಕೋಶ ರಚನೆಯೇ ಆಗಿಲ್ಲ.
ಬಿಬಿಎಂಪಿ, ಬಿಡಿಎ ಆಡಳಿತದಲ್ಲಿ ಪದೇ ಪದೇ ಭ್ರಷ್ಟಾಚರದ ಆರೋಪ ಕೇಳಿ ಬಂದರೂ ಸಮರ್ಥವಾದ ತನಿಖೆಗೆ, ಜನರ ದೂರು ಸ್ವೀಕರಿಸಲು ವೇದಿಕೆ ಇಲ್ಲ. ಹೀಗಾಗಿ ಸಾಮಾಜಿಕ ಕಾರ್ಯಕರ್ತ ಅಮರೇಶ್ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ಗೆ ಪತ್ರ ಬರೆದು, ಸರ್ಕಾರದ ನಡಾವಳಿಯಂತೆ ತಕ್ಷಣವೇ ಎಸಿಬಿ ಕಚೇರಿ ಆರಂಭಿಸಲು ಕ್ರಮಕೈಗೊಳ್ಳುವಂತೆ ತಿಳಿಸಿದ್ದಾರೆ. ಇನ್ನು ಮಾಹಿತಿ ಹಕ್ಕು ಇಲಾಖೆಯ ಆಯುಕ್ತರೂ ತಕ್ಷಣವೇ ಸ್ಥಳೀಯ ಸಂಸ್ಥೆಗಳಲ್ಲಿ ಎಸಿಬಿ ಕಚೇರಿ ಆರಂಭಿಸಲು ಸೂಚನೆ ನೀಡಿದ್ದಾರೆ.
ಆರ್ ಟಿ ಐ ಕಾರ್ಯಕರ್ತ ಅಮರೇಶ್ ಮಾತನಾಡಿ, ಈ ಹಿಂದೆ ಸಿದ್ಧರಾಮಯ್ಯ ಸರ್ಕಾರದ ಅವಧಿಯಲ್ಲಿ ಎಸಿಬಿ ರಚನೆ ಮಾಡಿದ್ದಾಗ, ಪ್ರತೀ ಸರ್ಕಾರಿ ಕಚೇರಿಯಲ್ಲಿ ಎಸಿಬಿ ಕಚೇರಿ ರಚನೆ ಮಾಡಬೇಕು. ಅದಕ್ಕೆ ಜಾಗೃತ ಕೋಶದ ಚೀಫ್ ಹಾಗೂ ಅಧಿಕಾರಿಗಳನ್ನು ನೇಮಕ ಮಾಡಬೇಕು ಎಂದು ಸರ್ಕಾರದ ನಡಾವಳಿ ಇತ್ತು. ಆದರೆ ಇದುವರೆಗೂ ಬಿಬಿಎಂಪಿ, ಬಿಡಿಎಗಳಲ್ಲಿ ಎಸಿಬಿ ಕಚೇರಿಗಳು ಆರಂಭವಾಗಿಲ್ಲ. ಮಾಹಿತಿ ಹಕ್ಕಿನಡಿ ತಕ್ಷಣವೇ ಎಸಿಬಿ ಕಚೇರಿ ಆರಂಭಗೊಳ್ಳಬೇಕು ಎಂದು ಆರ್ ಟಿ ಐ ಆಯುಕ್ತರು ತಿಳಿಸಿದ್ದಾರೆ. ಹೀಗಾಗಿ ಮೇಯರ್ ಗೌತಮ್ ಕುಮಾರ್ ಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.