ಬೆಂಗಳೂರು: ಅಧಿಕಾರಿ- ಹಾಗೂ ಸಿಬ್ಬಂದಿ ಕೊರತೆ ನಡುವೆಯೂ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಭ್ರಷ್ಟ ಅಧಿಕಾರಿಗಳ ವಿರುದ್ಧ ತನಿಖೆಗೆ ಅನುಮತಿ ನೀಡಲು ರಾಜ್ಯ ಸರ್ಕಾರ ಮೀನಮೇಷ ಎಣಿಸಿದೆ. ಕಳೆದ ವರ್ಷ ನವೆಂಬರ್ನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಪ್ರಧಾನ ಕಚೇರಿ ಹಾಗೂ ನಗರದ ವಿವಿಧ ಶಾಖಾ ಕಚೇರಿಗಳ ಮೇಲೆ ಎಸಿಬಿ ದೊಡ್ಡ ಮಟ್ಟದಲ್ಲಿ ದಾಳಿ ನಡೆಸಿತ್ತು.
ಈ ದಾಳಿ ವೇಳೆ, ಅಪಾರ ಪ್ರಮಾಣದ ಸಂಪತ್ತು ಪತ್ತೆಯಾಗಿತ್ತು. ಅಕ್ರಮ ಆಸ್ತಿಗಳಿಕೆ ಆರೋಪ ಸಂಬಂಧ 128 ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ತನಿಖೆ ನಡೆಸಲು ಅನುಮತಿ ಕೋರಿ ಸಕ್ಷಮ ಪ್ರಾಧಿಕಾರಕ್ಕೆ ಎಸಿಬಿ ಪತ್ರ ಬರೆದಿತ್ತು. ಈ ಪೈಕಿ 8 ಮಂದಿ ಮಾತ್ರ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಲು ಪ್ರಾಧಿಕಾರ ಅನುಮತಿ ನೀಡಿದೆ.
ಅನುಮಾನಕ್ಕೆ ಎಡೆಮಾಡಿಕೊಟ್ಟ ಸರ್ಕಾರದ ನಡೆ: ಇನ್ನುಳಿದ 120 ಅಧಿಕಾರಿಗಳ ವಿರುದ್ಧ ಮುಂದಿನ ಕಾನೂನುಕ್ರಮ ಕೈಗೊಳ್ಳಲು ಅನುಮತಿ ನೀಡಿಲ್ಲ. ಲಂಚಗುಳಿತನ ಹೋಗಲಾಡಿಸಬೇಕಾದ ಸರ್ಕಾರವೇ ಭ್ರಷ್ಟರೊಂದಿಗೆ ಕೈ ಜೋಡಿಸಿದೆಯಾ ಎಂಬ ಗುಮಾನಿ ಇದೀಗ ಕಾಡುತ್ತಿದೆ. ಕಾರ್ಯಕಾರಿ ಅಧಿಕಾರಿ ಹಾಗೂ ಸಿಬ್ಬಂದಿ ಕೊರತೆ ನಡುವೆಯೂ ಭ್ರಷ್ಟರ ವಿರುದ್ಧ ಭೇಟೆಯಾಡುವ ಎಸಿಬಿಗೆ ತನಿಖೆ ನಡೆಸಲು ಸಕ್ಷಮ ಪ್ರಾಧಿಕಾರ ಅನುಮತಿ ನೀಡದೇ ವಿಳಂಬ ಧೋರಣೆ ಅನುಸರಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಅಧಿಕಾರಿಗಳ ಪ್ರಭಾವಕ್ಕೆ ಮಣಿಯಿತಾ ಸರ್ಕಾರ..?: ಮೆಲ್ನೋಟಕ್ಕೆ ಅಕ್ರಮ ಆಸ್ತಿಗಳಿಕೆ ಕಂಡು ಬಂದರೂ ಹೆಚ್ಚಿನ ವಿಚಾರಣೆಗೆ ಒಳಪಡಿಸಲು ಎಸಿಬಿಗೆ ಸಾಧ್ಯವಾಗಿಲ್ಲ. ಸರ್ಕಾರಿ ಅಧಿಕಾರಿ ಆಥವಾ ಸಿಬ್ಬಂದಿ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್ ಅನ್ವಯ 17 (ಎ) ಎಫ್ಐಆರ್ ದಾಖಲಿಸಿಕೊಳ್ಳಬೇಕಾದರೆ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಕಡ್ಡಾಯವಾಗಿದೆ. ಆರೋಪ ಸಾಬೀತಾದರೆ 3ರಿಂದ 7 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಬಹುದಾಗಿದೆ.
ಭ್ರಷ್ಟಾಚಾರದ ಆರೋಪ ಹೊತ್ತಿರುವ ಅಧಿಕಾರಿಗಳು ತಮ್ಮ ಪ್ರಭಾವ ಬಳಸಿ ತಮ್ಮ ವಿರುದ್ಧ ಕಾನೂನು ಕ್ರಮ ಜರುಗಿಸದಿರಲು ಯಶಸ್ವಿಯಾಗಿದ್ದಾರೆ. 128 ಮಂದಿ ಆಧಿಕಾರಿಗಳಲ್ಲಿ ಬಿಡಿಎ ಮಾಜಿ ಆಯುಕ್ತರು, ಇಂಜಿನಿಯರ್ಗಳು, ಪಿಡಿಒಗಳು ಹಾಗೂ ಪೊಲೀಸ್ ಅಧಿಕಾರಿಗಳು ಒಳಗೊಂಡಂತೆ ವಿವಿಧ ಇಲಾಖೆಯ ಸರ್ಕಾರಿ ಅಧಿಕಾರಿಗಳಿದ್ದಾರೆ. ಇನ್ನೂ ಕೆಲವು ಪ್ರಕರಣಗಳಲ್ಲಿ ಆರೋಪಿತರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಗೆ ಹಾಗೂ ಪ್ರಾಸಿಕ್ಯೂಷನ್ಗೆ ಸಕ್ಷಮ ಪ್ರಾಧಿಕಾರ ಅನುಮತಿ ನೀಡದಿರುವುದು ಕಂಡುಬಂದಿದೆ.
ಇದನ್ನೂ ಓದಿ: ಧರ್ಮ ದ್ವೇಷ ಬಿತ್ತುತ್ತಿರುವ ವ್ಯಕ್ತಿಗಳ ವಿರುದ್ಧ ಕ್ರಮ: ಪೊಲೀಸ್ ಆಯುಕ್ತರಿಗೆ ಮನವಿ
ಒಂದು ಪ್ರಕರಣದಲ್ಲಿ ಸರ್ಕಾರಿ ಅಧಿಕಾರಿ ಆರೋಪಿತನಾದರೆ ಆ ಕೇಸ್ನ ಸಂಪೂರ್ಣ ದಾಖಲೆಗಳನ್ನು ಸರ್ಕಾರಕ್ಕೆ ಕಳಿಸಲಾಗುತ್ತೆ. ಆ ಸರ್ಕಾರಿ ಅಧಿಕಾರಿ ಕಾರ್ಯ ನಿರ್ವಹಿಸುವ ಸಕ್ಷಮ ಪ್ರಾಧಿಕಾರ ಎಸಿಬಿ ನೀಡಿರುವ ವರದಿ ಆಧರಿಸಿ ಗುಪ್ತವಾಗಿ ಮತ್ತೊಂದು ಬಾರಿ ತನಿಖೆ ನಡೆಸಲಿದೆ. ಎಸಿಬಿ ಕೊಟ್ಟ ದಾಖಲೆಗಳು ಹಾಗೂ ಸರ್ಕಾರದಲ್ಲಿನ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತೆ.
ದಾಖಲೆಗಳು ಎರಡು ಹೊಂದಾಣೆಕೆಯಾದಾಗ ಸಕ್ಷಮ ಪ್ರಾಧಿಕಾರ ಎಸಿಬಿಗೆ ತನಿಖೆಗೆ ಮುಂದುವರೆಸುವಂತೆ ಅನುಮತಿ ನೀಡುತ್ತದೆ. ಈ ಎಲ್ಲಾ ಪ್ರಕ್ರಿಯೆ ನಡೆಸಲು ಸರ್ಕಾರದ ಅನುಮತಿಬೇಕು. ಆದರೆ 128 ಮಂದಿಯಲ್ಲಿ ಭ್ರಷ್ಟಾಚಾರ ಆರೋಪ ಹೊತ್ತಿರುವ 8 ಮಂದಿ ವಿರುದ್ಧ ಮಾತ್ರ ತನಿಖೆಗೆ ಮಾತ್ರ ಅವಕಾಶ ನೀಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.