ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಭ್ರಷ್ಟ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಸಮರ ಸಾರಿರುವ ಎಸಿಬಿ ಅಧಿಕಾರಿಗಳು ಎರಡು ದಿನಗಳ ಗ್ಯಾಪ್ ಬಳಿಕ ಕೇಂದ್ರ ಕಚೇರಿ ಸೇರಿದಂತೆ ನಗರದ ಐದು ಬಿಡಿಎ ಕಚೇರಿಗಳ ಮೇಲೆ ದಾಳಿ ನಡೆಸಿ ಮತ್ತಷ್ಟು ಅಕ್ರಮಗಳನ್ನು ಬಯಲಿಗೆಳೆದಿದ್ದಾರೆ.
ಕಳೆದ ಶುಕ್ರವಾರ ಏಕಾಏಕಿ ಬಿಡಿಎ ಕೇಂದ್ರ ಕಚೇರಿ ಮೇಲೆ ದಾಳಿ ನಡೆಸುವ ಮೂಲಕ ಶಾಕ್ ನೀಡಿದ್ದ ಎಸಿಬಿ ಅಧಿಕಾರಿಗಳು ಮಹತ್ವದ ದಾಖಲಾತಿಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಭಾನುವಾರ ಹಾಗೂ ಸೋಮವಾರ ಸರ್ಕಾರಿ ರಜೆ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ದಾಳಿ ಸ್ಥಗಿತಗೊಳಿಸಿದ್ದರು. ಇಂದು ದಾಳಿ ಮುಂದುವರೆಸಿದ ಎಸಿಬಿ ಅಧಿಕಾರಿಗಳು ಬನಶಂಕರಿ, ವಿಜಯನಗರ, ಆರ್.ಟಿ.ನಗರ, ಹೆಚ್ಎಸ್ಆರ್ ಲೇಔಟ್ ಹಾಗೂ ಬಿಡಿಎ ಕೇಂದ್ರ ಕಚೇರಿಗಳ ಮೇಲೆಯೂ ದಾಳಿ ನಡೆಸಿ ಆಚ್ಚರಿ ಮೂಡಿಸಿದ್ದರು. ಬಗೆದಷ್ಟು ಆಳ ಎಂಬಂತೆ ದಾಳಿ ವೇಳೆ ಬಿಡಿಎ ಕಚೇರಿಗಳ ಭ್ರಷ್ಟ ವ್ಯವಸ್ಥೆಯ ಅಕ್ರಮ ಬಯಲಾಗಿದೆ.
ಭೂಸ್ವಾಧೀನಾಧಿಕಾರಿಗಳ ಕೇಂದ್ರ ಕಚೇರಿಯಲ್ಲಿ ಬಿಡಿಎನಿಂದ ವಶಪಡಿಸಿಕೊಂಡ ಜಮೀನಿನ ಪರಿಹಾರದ ಮೊತ್ತವನ್ನು ಸುಳ್ಳು ಮಾಹಿತಿ ನೀಡಿ ನಕಲಿ ದಾಖಲೆ ಸೃಷ್ಟಿಸಿ ಬಿಡಿಎ ಅಧಿಕಾರಿ ಮತ್ತು ಸಿಬ್ಬಂದಿ ಅನರ್ಹ ವ್ಯಕ್ತಿಗಳಿಗೆ ಸಿಗುವಂತೆ ಮಾಡಿದ್ದಾರೆ. ಉತ್ತರಹಳ್ಳಿ ಹೋಬಳಿಯ ಭಾರತ್ ಹೆಚ್ ಬಿಸಿಎಸ್ ಲೇಔಟ್‌ನ ನಾಗರೀಕ ಸೌಲಭ್ಯ ನಿವೇಶನಗಳನ್ನು ನಾಗರೀಕ ಸೌಲಭ್ಯಗಳ ಉದ್ದೇಶಕ್ಕಾಗಿ ಸಂಘ-ಸಂಸ್ಥೆಗಳಿಗೆ ಹಂಚಿಕೆ ಮಾಡಿದ್ದರೂ ಸಂಘ-ಸಂಸ್ಥೆಗಳು ದುರ್ಬಳಕೆ ಮಾಡಿಕೊಂಡಿವೆ. ಮೇಲ್ನೋಟಕ್ಕೆ ಕಾನೂನು ನಿಯಮ ಉಲ್ಲಂಘಿಸಿವೆ.
ಇನ್ನೂ ಹೆಚ್ಎಸ್ಆರ್ ಲೇಔಟ್ ಬಿಡಿಎ ಕಚೇರಿ ವ್ಯಾಪ್ತಿಯಲ್ಲಿ ಸಿಎ ಸೈಟ್ಗಳನ್ನು ಬಿಡಿಎ ಅನುಮೋದಿತ ನಕ್ಷೆ ಪ್ರಕಾರ ಕಟ್ಟಡ ನಿರ್ಮಿಸದೆ ನಿಯಮ ಉಲ್ಲಂಘಿಸಿದ್ದು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಕಂಡುಬಂದಿದೆ.
ಕಡತಗಳ ಪರಿಶೀಲನೆ ವೇಳೆ ನಿವೇಶನ ಹಂಚಿಕೆದಾರರಿಗೆ ಹಂಚಿಕೆಯಾದ ಸ್ಥಳದಲ್ಲಿ ಹಂಚಿಕೆ ಮಾಡದೇ ನಿಯಮಬಾಹಿರವಾಗಿ ಬೇರೆ ಕಡೆಗಳಲ್ಲಿ ಹಂಚಿಕೆ ಮಾಡಿರುವುದು ಕಂಡುಬಂದಿದೆ.
ಹಳೆಯ ಬಡಾವಣೆಗಳಲ್ಲಿ ದೊಡ್ಡ ನಿವೇಶನಗಳನ್ನು ಯಾರಿಗೂ ಸಹ ಹಂಚಿಕೆ ಮಾಡದೇ ಹಾಗೆಯೇ ಖಾಲಿ ಬಿಟ್ಟು ತಾತ್ಕಾಲಿಕವಾಗಿ ಖಾಸಗಿ ವ್ಯಕ್ತಿಗಳಿಗೆ ಶೆಡ್‌ಗಳನ್ನು ನಿರ್ಮಿಸಲು ಅವಕಾಶ ಮಾಡಿಕೊಟ್ಟು ಸರ್ಕಾರಕ್ಕೆ ನಷ್ಟ ಮಾಡಿರುವುದು ಕಂಡುಬಂದಿದ್ದು, ಎಸಿಬಿ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.
ಜಮೀನು ಮಾಲೀಕರಿಂದ ಜಮೀನನ್ನು ಭೂಸ್ವಾಧೀನಪಡಿಸಿಕೊಂಡು ಜಮೀನು ಮಾಲೀಕರಿಗೆ ಪರಿಹಾರವನ್ನು ನೀಡಿ, ಭೂ ಮಾಲೀಕರಿಗೆ ಹಂಚಿಕೆಯಾಗಿದ್ದ ನಿವೇಶನಗಳನ್ನು ವಾಪಸ್ಸು ಬಿಡಿಎಗೆ ವಶಪಡಿಸಿಕೊಳ್ಳದೇ ಬೇರೆಯವರಿಗೆ ಹಂಚಿಕೆ ಮಾಡಿ ಅಕ್ರಮ ಎಸಗಿರುವುದು ಗೊತ್ತಾಗಿದೆ.
ಕಾರ್ನರ್ ಸೈಟ್ಗಳನ್ನು ಹರಾಜು ಪ್ರಕ್ರಿಯೆ ಮುಖಾಂತರ ಮಾರಾಟ ಮಾಡುವ ಜಾಗದಲ್ಲಿ ಹರಾಜು ಪ್ರಕ್ರಿಯೆ ಮಾಡದೇ ಕಾರ್ನರ್ ಸೈಟ್ ಹಂಚಿಕೆ ಮಾಡಿ ಸರ್ಕಾರಕ್ಕೆ ನಷ್ಟ ಮಾಡಿದ್ದಾರೆ.
ವಿಭಾಗವಾರು ಕಚೇರಿಗಳಲ್ಲಿ ಕಡತಗಳ ಸಂಖ್ಯೆಯ ಆಧಾರದ ಮೇಲೆ ಖಚಿತ ಅಳತೆ ರೆಕಾರ್ಡ್ ನಿರ್ವಹಣೆ ಮಾಡಬೇಕಾಗಿದೆ. ಆದರೆ ವಿಭಾಗ ಕಚೇರಿಗಳಲ್ಲಿ ಖಚಿತ ಅಳತೆಯ ರೆಕಾರ್ಡ್‌ಗಳನ್ನು ನಿರ್ವಹಣೆ ಮಾಡದಿರುವುದು ಕಂಡುಬಂದಿದೆ.
ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಸಂಬಂಧಪಟ್ಟಂತೆ ಭೂ ಸ್ವಾಧೀನಪಡಿಸಿಕೊಂಡು, ಪರಿಹಾರವನ್ನು ನೈಜ ಜಮೀನು ಮಾಲೀಕರಿಗೆ ನೀಡದೇ 3ನೇ ವ್ಯಕ್ತಿಗೆ ನೀಡಿರುವುದು ಕಂಡುಬಂದಿದೆ.
ಬಿಡಿಎ ಕಚೇರಿಯಲ್ಲಿನ ಅವ್ಯವಹಾರದ ಕುರಿತು ಸಾರ್ವಜನಿಕರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದು ಅವ್ಯಹಾರದ ಕುರಿತು ಲಿಖಿತವಾಗಿ ದೂರನ್ನು ನೀಡುವಂತೆ ಎಸಿಬಿ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.