ಬೆಂಗಳೂರು : ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಕಾರ್ಯಾಚರಣೆಗೆ ಇಳಿದಿದ್ದು, ಲಂಚಕೋರರಿಗೆ ಬಿಸಿ ಮುಟ್ಟಿಸಿದ್ದಾರೆ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ರಾಜಸ್ವ ನಿರೀಕ್ಷಕ ಹಾಗೂ ಚಿಕ್ಕಜಾಲ ಠಾಣೆಯ ಕಾನ್ಸ್ಟೇಬಲ್ವೊಬ್ಬರನ್ನು ಎಸಿಬಿ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಸೆರೆ ಹಿಡಿದಿದ್ದಾರೆ.
ಜಮೀನಿನ ಪ್ರಕರಣ ಸಂಬಂಧ ವ್ಯಾಜ್ಯ ಮಾಡಿಕೊಂಡಿದ್ದ ದೂರುದಾರನಿಂದ ₹5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಆರ್ ಐ ಹನುಮಯ್ಯ ಹಾಗೂ ಜಮೀನಿನ ವಿಚಾರಕ್ಕೆ ಸಂಬಂಧಪಟ್ಟಂತೆ ರಕ್ಷಣೆ ನೀಡಲು ₹6 ಲಕ್ಷ ಹಣದ ಬೇಡಿಕೆ ಇಟ್ಟಿದ್ದ ಹೆಡ್ ಕಾನ್ಸ್‌ಟೇಬಲ್ ರಾಜು ಸೆರೆ ಸಿಕ್ಕ ಆರೋಪಿಗಳು.
ಜಮೀನು ಮಾಲೀಕ ನೀಡಿದ್ದ ದೂರಿನ ಮಾಹಿತಿ ಮೇರೆಗೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳಿಗೆ ಲಂಚ ಕೇಳಿದ್ದ ಆರೋಪಿಗಳು ರೆಡ್ ಹ್ಯಾಂಡ್ ಆಗಿ ತಗಲ್ಹಾಕಿಕೊಂಡಿದ್ದಾರೆ. ಆದರೆ, ಹೆಡ್ ಕಾನ್ಸ್‌ಟೇಬಲ್ ರಾಜುಗೆ ಹಣ ಪಡೆಯಲು ಸೂಚಿಸಿದ್ದ ಚಿಕ್ಕಜಾಲ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಯಶವಂತ್ ಎಸ್ಕೇಪ್ ಆಗಿದ್ದಾನೆ.
ದೂರುದಾರರ ಬಳಿ 6 ಲಕ್ಷ ಹಣ ಪಡೆಯಲು ಸೂಚಿಸಿದ್ದ ಯಶವಂತ್, ದಾಳಿ ವೇಳೆ ಠಾಣೆಯಿಂದ ಎಸ್ಕೇಪ್ ಆಗಿರುವುದರಿಂದ ಆತನ ಸೆರೆಗಾಗಿ ಎಸಿಬಿ ಬಲೆ ಬೀಸಿದೆ.