ಬೆಂಗಳೂರು : ಖಾಸಗಿ ಮಧ್ಯವರ್ತಿಗಳ ನೆರವಿನಿಂದ ತಮ್ಮ ವ್ಯಾಪ್ತಿಗೆ ಬರುವ ಕಾರ್ಖಾನೆ ಹಾಗೂ ಸೆಕ್ಯೂರಿಟಿ ಏಜೆನ್ಸಿ ಮಾಲೀಕರಿಂದ ಲಂಚ ಪಡೆಯುತ್ತಿದ್ದ ಆರೋಪದ ಮೇರೆಗೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಕಾರ್ಮಿಕ ಇಲಾಖೆಯ ಮೇಲೆ ದಾಳಿ ಮಾಡಿದೆ.
ಡೈರಿ ಸರ್ಕಲ್ ಬಳಿಯಿರುವ ಕಾರ್ಮಿಕ ಭವನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಿರಿಯ ಅಧಿಕಾರಿಗಳು ಖಾಸಗಿ ಮಧ್ಯವರ್ತಿಗಳ ಮೂಲಕ ಕಾರ್ಖಾನೆ ಮಾಲೀಕರು, ಬೃಹತ್ ಮಳಿಗೆಗಳು, ಸೆಕ್ಯೂರಿಟಿ ಏಜೆನ್ಸಿ, ಖಾಸಗಿ ಕಚೇರಿಗಳ ಮೇಲ್ವಿಚಾಲಕರು, ಹೋಟೆಲ್, ಒಳಾಂಗಣ ವಿನ್ಯಾಸ ಹಾಗೂ ಕಟ್ಟಡ ಕಾರ್ಮಿಕರು ಹೊಂದಿರುವ ಹಾಗೂ ತಮ್ಮ ವ್ಯಾಪ್ತಿಗೆ ಬರುವ ಸ್ಥಳಕ್ಕೆ ಭೇಟಿ ನೀಡಿ, ದಾಖಲಾತಿ ನಿರ್ವಹಣೆ ಸರಿಯಿಲ್ಲ ಎಂದು ಹೇಳಿ ಮಾಲೀಕರಿಂದ ಅಧಿಕಾರಿಗಳು ಲಂಚ ಪಡೆಯುತ್ತಿದ್ದರು.
ಖಚಿತ ಮಾಹಿತಿ ಮೇರೆಗೆ ಎಸಿಬಿ ಡಿವೈಎಸ್ಪಿ ಪ್ರತಾಪ್ ರೆಡ್ಡಿ ನೇತೃತ್ವದಲ್ಲಿ ಎಂಟು ಮಂದಿ ಇನ್ಸ್ಪೆಕ್ಟರ್ ಸೇರಿ 30ಕ್ಕೂ ಹೆಚ್ಚು ಅಧಿಕಾರಿಗಳಿಂದ ಕಾರ್ಮಿಕ ಭವನದಲ್ಲಿನ ಎಂಟು ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ ಶೋಧ ನಡೆಸಿದ್ದಾರೆ.
ಕಾರ್ಮಿಕ ಭವನದಲ್ಲಿರುವ ಸಹಾಯಕ ಕಾರ್ಮಿಕ ಆಯುಕ್ತರು (ವೃತ್ತ-2) ಹಾಗೂ ವಿವಿಧ ವೃತ್ತದ ಹಿರಿಯ ಕಾರ್ಮಿಕರ ನಿರೀಕ್ಷಕರ ಕಚೇರಿಗಳ ಮೇಲೆಯೂ ದಾಳಿ ನಡೆಸಿ ಪರಿಶೀಲಿಸಿದ್ದಾರೆ. ದಾಳಿ ವೇಳೆ ಪೂರಕ ದಾಖಲೆಯಿಲ್ಲದ ₹1.54 ಲಕ್ಷ ಹಣ ಪತ್ತೆ ಹಚ್ಚಿದ್ದಾರೆ. ದಾಳಿಯಲ್ಲಿ ಅಧಿಕಾರಿಗಳ ಹಾಗೂ ಸಿಬ್ಬಂದಿ ಪಾತ್ರದ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಹಿರಿಯ ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಗಾರ್ಮೆಂಟ್ಸ್ ಕಂಪನಿಗಳಿಂದಲೂ ಲಂಚ ಪಡೆದ ಆರೋಪ : ಹಿರಿಯ ಕಾರ್ಮಿಕ ನಿರೀಕ್ಷಕರ ಕಚೇರಿಗಳಲ್ಲಿ ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು ಗಾರ್ಮೆಂಟ್ಸ್, ಸೆಕ್ಯೂರಿಟಿ ಏಜೆನ್ಸಿ ಸೇರಿದಂತೆ ಸಾಕಷ್ಟು ಕಂಪನಿಗಳಿಂದ ಅಧಿಕಾರಿಗಳು ಹಣ ವಸೂಲಿ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಕಾರ್ಮಿಕರ ಪಿಎಫ್ (ಭವಿಷ್ಯನಿಧಿ) ಗ್ರ್ಯಾಚ್ಯುಯಿಟಿ ಸೇರಿದಂತೆ ನಾನಾ ಸೌಲಭ್ಯಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ.
ವ್ಯವಸ್ಥೆಯಲ್ಲಿ ಲೋಪ ಕಂಡು ಬಂದಲ್ಲಿ ಕ್ರಮ ಜರುಗಿಸದೆ ಅಕ್ರಮ ಹಣಕ್ಕಾಗಿ ಡಿಮ್ಯಾಂಡ್ ಮಾಡಿದ ಆಪಾದನೆ ಕೇಳಿ ಬಂದಿದೆ. ಸ್ಥಳದಲ್ಲೇ ಮೊಕ್ಕಾಂ ಹೂಡಿರುವ ಅಧಿಕಾರಿಗಳು ಎಸಿಬಿ ಅಧಿಕಾರಿಗಳು ಶೋಧಕಾರ್ಯ ಚುರುಕುಗೊಳಿಸಿದ್ದಾರೆ.
ಓದಿ: ಜಾತಿಗಣತಿ ವರದಿ ಪರಿಶೀಲಿಸಿ ಜಯಪ್ರಕಾಶ್ ಹೆಗ್ಡೆ ಅವರು ಮಂಡಿಸಿದ ಬಳಿಕ ಸಚಿವ ಸಂಪುಟ ನಿರ್ಧಾರ.. ಸಚಿವ ಕೋಟಾ