ಯಲಹಂಕ : ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಕೆಎಎಸ್ ಅಧಿಕಾರಿ ಡಾ.ಬಿ.ಸುಧಾ ಅವರ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಂದು ಮುಂಜಾನೆ ಏಕಕಾಲದಲ್ಲಿ ಡಾ. ಬಿ. ಸುಧಾ ಮನೆ ಮತ್ತು ಕಚೇರಿ ಸೇರಿದಂತೆ 6 ಕಡೆಗಳಲ್ಲಿ ದಾಳಿ ನಡೆದಿದೆ.
ಡಾ.ಬಿ.ಸುಧಾ ಈ ಹಿಂದೆ ಬಿಡಿಎನಲ್ಲಿ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿದ್ದರು. ಈ ಸಮಯದಲ್ಲಿ ಭೂ ಪರಿಹಾರ ನೀಡುವ ವಿಚಾರದಲ್ಲಿ ತಮ್ಮ ಪತಿ ಮತ್ತು ದಲ್ಲಾಳಿಗಳ ಮೂಲಕ ಲಂಚ ಪಡೆದಿದ್ದರು ಎಂದು ಆರೋಪಿಸಲಾಗಿತ್ತು. ತಮ್ಮ ಸಂಬಳಕ್ಕಿಂತಲೂ ಹೆಚ್ಚಿನ ಆದಾಯ ಹೊಂದಿರುವ ಹಿನ್ನೆಲೆ ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಾಹಾಂ ಲೋಕಾಯುಕ್ತದಲ್ಲಿ ಸುಧಾ ಅವರ ವಿರುದ್ಧ ದೂರು ಸಹ ದಾಖಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ್ದ ಲೋಕಾಯುಕ್ತರು ಇದಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸುವಂತೆ ಎಸಿಬಿಗೆ ಆದೇಶಿಸಿದ್ದರು.
ಹಾಗಾಗಿ, ಇಂದು ಬೆಳಗ್ಗೆ ಎಸಿಬಿ ಡಿವೈಎಸ್ಪಿ ಪ್ರತಾಪ್ ರೆಡ್ಡಿ ನೇತೃತ್ವದಲ್ಲಿ ಎಸಿಬಿ ಅಧಿಕಾರಿಗಳು ಏಕಕಾಲದಲ್ಲಿ ಡಾ. ಸುಧಾ ಅವರ ನಿವಾಸ ಕೊಡಿಗೆ ಹಳ್ಳಿಯ ಭವ್ಯ ವಿಲ್ಲಾ, ಯಲಹಂಕದಲ್ಲಿ ಒಂದು ಫ್ಲ್ಯಾಟ್, ಬ್ಯಾಟರಾಯನಪುರದ ಮನೆ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಕೆಜಿಗಟ್ಟಲೆ ಚಿನ್ನಾಭರಣ, ₹10 ಲಕ್ಷ ನಗದು, ಆಸ್ತಿ ಪತ್ರಗಳು, ಐಷಾರಾಮಿ ಕಾರು ಸಿಕ್ಕಿವೆ.
ಡಾ.ಸುಧಾ ಈ ಹಿಂದೆ ಸೊರಬದಲ್ಲಿ ತಹಶೀಲ್ದಾರ್ ಆಗಿದ್ದರು. ನಂತರ ಶಿವಮೊಗ್ಗದಲ್ಲೇ ಬೇರೆ - ಬೇರೆ ತಾಲೂಕಿನಲ್ಲಿ ತಹಶೀಲ್ದಾರ್ ಆಗಿ ಕೆಲಸ ನಿರ್ವಹಿಸಿದ್ದಾರೆ. ಬಿಡಿಎನಲ್ಲಿ ಮೊದಲು ಡೆಪ್ಯೂಟಿ ಸೆಕ್ರೆಟರಿ ಆಗಿದ್ದು, ನಂತರ ಭೂ ಸ್ವಾಧೀನಾಧಿಕಾರಿಯಾಗಿದ್ದರು.
ಸದ್ಯ ಮಾಹಿತಿ ತಂತ್ರಜ್ಞಾನ ಇಲಾಖೆಯಲ್ಲಿ ಆಡಳಿತಾಧಿಕಾರಿಯಾಗಿರುವ ಡಾ. ಸುಧಾ, ರಿಪೋರ್ಟ್ ಮಾಡಿಕೊಂಡ ದಿನದಿಂದ ಈವರೆಗೂ ಕಚೇರಿಗೆ ಹೋಗಿಲ್ಲ ಎಂಬ ಆರೋಪ ಸಹ ಇದೆ.
ಡಾ.ಬಿ.ಸುಧಾ ಕೊಡಿಗೆಹಳ್ಳಿಯ ಭವ್ಯ ವಿಲ್ಲಾದ ಮೇಲೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ವಿಚಾರಣೆ ಮುಂದುವರಿಸಿದ್ದಾರೆ. ದಾಳಿ ವೇಳೆ ಕೆಜಿ ಗಟ್ಟಲೆ ಚಿನ್ನಾಭರಣ ಸಿಕ್ಕಿದ್ದು ಚಿನ್ನಾಭರಣವನ್ನು ತೂಕ ಹಾಕಲು ಅಕ್ಕಸಾಲಿಗರನ್ನ ಎಸಿಬಿ ಅಧಿಕಾರಿಗಳು ಕರೆಸಿದ್ದಾರೆ. ಎಸಿಬಿ ಅಧಿಕಾರಿಗಳ ವಿಚಾರಣೆಯಲ್ಲಿ ಸುಧಾ ಅವರ ಪತಿ ಸ್ಟ್ರೊನಿ ಫಾಯಿಸ್ ಸ್ಯಾಂಡಲ್ವುಡ್ನಲ್ಲಿ ಚಿತ್ರ ನಿರ್ಮಾಣ ಮಾಡಿರುವ ಸಂಗತಿ ಬಯಲಿಗೆ ಬಂದಿದೆ. ಸುಧಾ ಕ್ರಿಯೇಷನ್ ಬ್ಯಾನರ್ ಅಡಿ ಸ್ಯಾಂಡಲ್ವುಡ್ನಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದ್ದರು.