ಬೆಂಗಳೂರು: ದೇಶದ 18 ವರ್ಷ ಮೇಲ್ಪಟ್ಟ ನಾಗರಿಕರು ಮತದಾನಕ್ಕೆ ಅರ್ಹರು ಎಂಬುದು ತಿಳಿದಿತ್ತು. ಈಗ 18 ವರ್ಷ ಆಗುವವರೆಗೂ ಕಾಯಬೇಕಿಲ್ಲ. 17 ವರ್ಷ ಮೇಲ್ಪಟ್ಟವರು ಸಹ ಅರ್ಜಿ ಸಲ್ಲಿಸಬಹುದು. ನಂತರ 18 ವರ್ಷಕ್ಕೆ ಕಾಲಿಟ್ಟ ಕೂಡಲೇ ಬಿಬಿಎಂಪಿ ಅವರ ಹೆಸರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಿದೆ.
ಸದ್ಯಕ್ಕೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ 2023 ನಡೆಯುತ್ತಿದೆ. ಈ ಹಿನ್ನೆಲೆ ಬಿಬಿಎಂಪಿ ಇಂದು ಕಾಲ್ನಡಿಗೆ ಜಾಥಾ ನಡೆಸಿತು. ಈ ವೇಳೆ ಮಾಧ್ಯಮಗಳ ಜೊತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ವಾಕಥಾನ್ ಮೂಲಕ ಜನರಲ್ಲಿ ಅರಿವು ಮೂಡಿಸುತ್ತಿದ್ದೇವೆ. ಮತದಾರರ ಪಟ್ಟಿಯಲ್ಲಿ ಅರ್ಹ ಮತದಾರರು ತಮ್ಮ ಹೆಸರು ಸೇರಿಸಬೇಕು. ಪ್ರಜಾಪ್ರಭುತ್ವದಲ್ಲಿ ಮತದಾನ ಮಾಡುವುದು ಆದ್ಯ ಕರ್ತವ್ಯ. ಹೀಗಾಗಿ, ಮತಪಟ್ಟಿಗೆ ಹೆಸರು ಸೇರಿಸಬೇಕು. ಯಾರು ಯಾರು 17 ವರ್ಷ ಮೇಲ್ಪಟ್ಟವರಿದ್ದಾರೋ ಎಲ್ಲರೂ ಅರ್ಜಿ ಹಾಕಬಹುದು. 18 ವರ್ಷ ಆದ ಕೂಡಲೇ ಅವರು ಮತದಾನದ ಪಟ್ಟಿಗೆ ಸೇರ್ಪಡೆ ಆಗಲಿದ್ದಾರೆ ಎಂದರು.
ಈವರೆಗೂ ಜನವರಿ 1ಕ್ಕೆ 18 ವರ್ಷ ಮೇಲ್ಪಟ್ಟವರನ್ನು ಸೇರ್ಪಡೆಗೊಳಿಸಲಾಗುತ್ತಿತ್ತು. ಆದರೆ, ಇನ್ಮುಂದೆ ವರ್ಷದ ನಾಲ್ಕು ದಿನ ಹೆಸರು ಸೇರ್ಪಡೆಯಾಗಲಿದೆ. ಜನವರಿ 1, ಎಪ್ರಿಲ್ 1, ಜುಲೈ 1 ಹಾಗೂ ಅಕ್ಟೋಬರ್ 1 ರಂದು 18 ವರ್ಷ ತುಂಬಿದವರನ್ನು ಮತದಾರರ ಪಟ್ಟಿಗೆ ಸೇರಿಸಲಾಗುತ್ತದೆ. ಅವರು ನಂತರ ಬರುವ ಚುನಾವಣೆಗೆ ಮತದಾನ ಮಾಡಬಹುದು ಎಂದು ಮಾಹಿತಿ ನೀಡಿದರು.
ಯುವಕ, ಯುವತಿಯರು ಮತದಾನದಲ್ಲಿ ಭಾಗಿಯಾಗಬೇಕು. ವಿಶೇಷ ಮತದಾರರು ಕೂಡ ತಮ್ಮ ಹಕ್ಕು ಚಲಾಯಿಸಬೇಕು. ಬೆಂಗಳೂರಿನಲ್ಲಿ ಬುದ್ಧಿವಂತ ಜನರಿದ್ದರೂ ಸಹ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲ. ಕೇವಲ 54 % ರಷ್ಟು ಮಾತ್ರ ಹೆಸರಿದೆ. ನಿರೀಕ್ಷಿತ 68% ನಷ್ಟು ಜನರು ಹೆಸರು ನೋಂದಣಿಯಾಗಿರಬೇಕಿತ್ತು. ಮತದಾನದ ಆಸಕ್ತಿ ಕಡಿಮೆ ಇದೆ. ಆದರೆ, ಈ ಬಾರಿ ಎಲ್ಲರೂ ಭಾಗವಹಿಸಬೇಕು. ಆನ್ಲೈನ್ ಮೂಲಕ ಎಲ್ಲರೂ ಅರ್ಜಿ ಸಲ್ಲಿಸಬಹುದು ಎಂದರು.
ಮುಂಜಾನೆ ಏಳು ಗಂಟೆಯಿಂದ, ಹಡ್ಸನ್ ವೃತ್ತ, ಕಬ್ಬನ್ ಉದ್ಯಾನದ ಮುಖ್ಯ ದ್ವಾರದಿಂದ ಕಾಲ್ನಡಿಗೆ ಜಾಥಾ ನಡೆಯಿತು. ಮುಖ್ಯ ಚುನಾವಣಾಧಿಕಾರಿಯಾದ ಮನೋಜ್ ಕುಮಾರ್ ಮೀನಾ, ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ವಾಕಥಾನ್ಗೆ ಚಾಲನೆ ನೀಡಿದರು.
ಇದನ್ನೂ ಓದಿ: ಹೈಕೋರ್ಟ್ ಆದೇಶದಂತೆ ಬಿಬಿಎಂಪಿ ಚುನಾವಣೆ ನಡೆಸಲು ನಾವು ಸಿದ್ಧ: ಮುಖ್ಯ ಆಯುಕ್ತ ತುಷಾರ್ ಗಿರಿನಾಥ್
ಮುಂಜಾನೆ ಏಳು ಗಂಟೆಯಿಂದ ಕಾಲ್ನಡಿಗೆ ಜಾಥಾವು ಹಡ್ಸನ್ ವೃತ್ತ, ಕಬ್ಬನ್ ಉದ್ಯಾನದ ಮುಖ್ಯ ದ್ವಾರದಿಂದ ಪ್ರಾರಂಭವಾಗಿ ಸೆಂಟ್ರಲ್ ಲೈಬ್ರರಿ, ಉಚ್ಚ ನ್ಯಾಯಾಲಯ, ವಿಧಾನಸೌಧ ರಸ್ತೆ, ಪ್ರೆಸ್ ಕ್ಲಬ್, ಕಬ್ಬನ್ ಉದ್ಯಾನದ ಮೂಲಕ ಬಾಲ ಭವನದವರೆಗೆ ನಡೆಯಿತು. ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ, ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ವಾಕಥಾನ್ಗೆ ಚಾಲನೆ ನೀಡಿದರು. ಈ ವೇಳೆ ಬಿಬಿಎಂಪಿ ಸಿಬ್ಬಂದಿ, ಚುನಾವಣಾ ಸಾಕ್ಷರತಾ ಸಂಘ, ಎನ್.ಸಿ.ಸಿ, ಎನ್.ಎಸ್.ಎಸ್ ವಿದ್ಯಾರ್ಥಿಗಳು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಸೇರಿದಂತೆ 1,000 ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.