ಬೆಂಗಳೂರು : ರಾಜ್ಯದ ನಗರ ಪ್ರದೇಶಗಳಲ್ಲಿ ಬಡವರಿಗಾಗಿ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಸುಮಾರು 45 ಸಾವಿರ ಮನೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಪ್ರಶ್ನೋತ್ತರ ವೇಳೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದ 23 ನಗರ ಪ್ರದೇಶಗಳಲ್ಲಿ ಬಡವರಿಗಾಗಿ ಮನೆ ನಿರ್ಮಿಸುವ ಕಾರ್ಯ ಆರಂಭಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ 44 ರಿಂದ 45 ಸಾವಿರ ಮನೆಗಳನ್ನು ನಗರ ಪ್ರದೇಶದ ಬಡವರಿಗೆ ನಿರ್ಮಿಸಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: ನಾಳೆ ನಡೆಯುವ ಬಂದ್ಗೆ ನಮ್ಮ ಸಂಪೂರ್ಣ ಬೆಂಬಲವಿದೆ: ಶಾಸಕ ಶಿವಲಿಂಗೇಗೌಡ
ಮನೆ ನಿರ್ಮಾಣ ಕಾರ್ಯವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪಾಲುದಾರಿಕೆಯಲ್ಲಿ ಕೈಗೆತ್ತಿಕೊಂಡಿವೆ. ಫಲಾನುಭವಿಗಳಿಂದ ತುಂಬಬೇಕಾಗಿದ್ದ ಹಣವನ್ನು ಕಾರ್ಮಿಕ ಇಲಾಖೆಯಿಂದ ಭರಿಸುವ ಬಗ್ಗೆಯೂ ಕಾರ್ಮಿಕ ಸಚಿವರ ಜತೆ ಚರ್ಚೆ ನಡೆಸುವುದಾಗಿ ತಿಳಿಸಿದರು.
ಇದನ್ನೂ ಓದಿ:ಕೊರೊನಾ ಮುಂಜಾಗೃತೆ : ಸದನದಲ್ಲಿ ಸ್ವಯಂ ಶಿಸ್ತು ಪಾಲಿಸಿ ಎಂದ ಸ್ಪೀಕರ್
ಅರಸೀಕೆರೆಯಲ್ಲಿ 1,310 ಮನೆಗಳ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಇದಕ್ಕೆ 5 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗುವುದು. ಮನೆಗಳ ನಿರ್ಮಾಣದ ಜತೆಗೆ ಮೂಲಭೂತ ಸೌಕರ್ಯ ಒದಗಿಸಲು ಆದ್ಯತೆ ನೀಡಲಾಗಿದೆ ಎಂದರು.