ಬೆಂಗಳೂರು: ಕೋವಿಡ್ ಪರಿಸ್ಥಿತಿಯಿಂದಾಗಿ ಸರಣಿ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಈ ಹಿನ್ನೆಲೆ ಬೀದಿನಾಯಿಗಳು ಆಹಾರವಿಲ್ಲದೇ ಸಂಕಷ್ಟಕ್ಕೆ ಸಿಲುಕಿವೆ. ಮತ್ತೊಂದೆಡೆ ಕಳೆದ ಐದಾರು ತಿಂಗಳಲ್ಲಿ ಎಬಿಸಿ ಚಿಕಿತ್ಸೆ ಸಂಪೂರ್ಣವಾಗಿ ಸ್ಥಗಿತವಾಗಿದೆ.
ಪೂರ್ವ ವಲಯ, ದಕ್ಷಿಣ ವಲಯ, ಬೊಮ್ಮನಹಳ್ಳಿಯಲ್ಲಂತೂ ಎಬಿಸಿ ಚಿಕಿತ್ಸೆ ನಡೆದೇ ಇಲ್ಲ. ಇದರಿಂದ ಸಾರ್ವಜನಿಕರಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಿದೆ. ಪಾಲಿಕೆ ಸದಸ್ಯರೂ ಈ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
ನವೆಂಬರ್ - ಡಿಸೆಂಬರ್ - ಜನವರಿ ಸಮಯದಲ್ಲಿ ಬೀದಿ ನಾಯಿಗಳು ಕೆರಳಿ ಮಕ್ಕಳು, ಸಾರ್ವಜನಿಕರ ಮೇಲೆ ಹಾವಳಿ ಮಾಡುತ್ತವೆ. ಕಳೆದ ವರ್ಷ ಅನೇಕ ಸಾವು ನೋವುಗಳೂ ದಾಖಲಾಗಿದೆ. ಈ ವರ್ಷವಾದರೂ ಈ ಹೊತ್ತಿಗೆ ನಾಯಿಗಳನ್ನು ಹಿಡಿದುಕೊಂಡು ಹೋಗಿ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಬೇಕಿತ್ತು. ಆದರೆ, ಪಾಲಿಕೆಯ ಬಳಿ ತಂಡಗಳೇ ಇಲ್ಲ.
ಕೋವಿಡ್ ನಡುವೆ ಬೀದಿನಾಯಿಗಳಿಂದಲೂ ಈ ಬಾರಿ ಇನ್ನಷ್ಟು ಆತಂಕ ಹೆಚ್ಚಾಗುವ ಸಾಧ್ಯತೆ ಇದೆ. ದಕ್ಷಿಣ ವಲಯದಲ್ಲಿ ಪಾಲಿಕೆಯ ಪಶುಸಂಗೋಪನೆ ವಿಭಾಗದಿಂದ ಈ ಕೆಲಸ ನಡೆದೇ ಇಲ್ಲ ಎಂದು ಪಾಲಿಕೆ ಸದಸ್ಯ ಡಾ. ರಾಜು ಆರೋಪಿಸಿದರು.
ಈಟಿವಿ ಭಾರತ್ ಈ ಬಗ್ಗೆ ಪಾಲಿಕೆಯ ಪಶುಸಂಗೋಪನೆ ವಿಭಾಗದ ಜಂಟಿ ಆಯುಕ್ತ ಶಶಿಕುಮಾರ್ ಅವರನ್ನು ಪ್ರಶ್ನಿಸಿದಾಗ, ಲಾಕ್ಡೌನ್ನಲ್ಲಿಯೂ ನಮ್ಮ ಕೆಲಸ ನಡೆಯುತ್ತಲೇ ಇತ್ತು. ಹಾಗಾಗಿ ಯಾವುದೇ ದೂರು ದಾಖಲಾಗಿಲ್ಲ. ಬೊಮ್ಮನಹಳ್ಳಿಯಲ್ಲಿ ಮಾತ್ರ ಸೆಂಟರ್ ದೂರವಿರುವ ಕಾರಣ ಇನ್ನೂ ಆರಂಭವಾಗಿಲ್ಲ. ಉಳಿದೆಡೆ ಎಬಿಸಿ ಚಿಕಿತ್ಸೆ, ಆ್ಯಂಟಿ ರೇಬೀಸ್ ಚುಚ್ಚುಮದ್ದು ನೀಡಲಾಗುತ್ತಿದೆ ಎಂದರು.
ಆದರೆ, ಇದರ ಅಂಕಿ ಅಂಶ ಹಾಗೂ ದಾಖಲೆಗಳನ್ನು ಕೇಳಿದ್ರೆ, ಸದ್ಯ ಕೋವಿಡ್ ಇರುವ ಕಾರಣ ಪಾಲಿಕೆ ಕಚೇರಿಯ ಆಫೀಸ್ ಮುಚ್ಚಲಾಗಿದೆ. ಸಿಬ್ಬಂದಿಗಳೂ ಕೆಲಸಕ್ಕೆ ಬರುತ್ತಿಲ್ಲ. ಹಾಗಾಗಿ ದಾಖಲೆಗಳು ಲಭ್ಯವಿಲ್ಲ ಎಂದು ಸಬೂಬು ಹೇಳಿದರು.
ಒಟ್ಟಿನಲ್ಲಿ ಬಾಯಿಮಾತಿನಲ್ಲಿ ಮಾತ್ರ ಕೆಲಸ ಆಗ್ತಿದೆ ಎಂದು ಹೇಳಿದ್ರೂ, ಕೋವಿಡ್ ಸಮಯದಲ್ಲಿ ಇದೇ ನೆಪಮಾಡಿಕೊಂಡು, ನಾಯಿಗಳ ಎಬಿಸಿ ಶಸ್ತ್ರಚಿಕಿತ್ಸೆಯನ್ನು ಕಡೆಗಣಿಸಲಾಗಿದೆ.
ಪಾಲಿಕೆಯ ಎಂಟು ವಲಯಗಳಲ್ಲಿ 3,09,972 ಬೀದಿ ನಾಯಿಗಳಿದ್ದು, ಇದರಲ್ಲಿ ಶೇಕಡಾ 46 ಅಂದರೆ 1,23,853 ಬೀದಿ ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಬೇಕಿದೆ ಎಂದು ಸಮೀಕ್ಷೆಯೊಂದು ತಿಳಿಸಿತ್ತು. ಬೇರೆ ವಲಯಕ್ಕಿಂತ ಬೊಮ್ಮನಹಳ್ಳಿ, ಮಹದೇವಪುರ, ಆರ್ ಆರ್ ನಗರ, ಯಲಹಂಕ ಹಾಗೂ ದಾಸರಹಳ್ಳಿ ವಲಯಗಳಲ್ಲೇ 1,97,622 ಬೀದಿನಾಯಿಗಳಿರುವುದು ಬೆಳಕಿಗೆ ಬಂದಿತ್ತು.
ಸದ್ಯ ಬಿಬಿಎಂಪಿ ಐದು ಸಂಸ್ಥೆಗಳಿಗೆ ಟೆಂಡರ್ ನೀಡಿ, ಲಾಕ್ಡೌನ್ ಅವಧಿಯಲ್ಲಿ ಬೀದಿನಾಯಿಗಳಿಗೆ ಆಹಾರ ಹಾಗೂ ಎಬಿಸಿ ಚಿಕಿತ್ಸೆ ನಡೆಸುವ ಟಾಸ್ಕ್ ನೀಡಿದ್ದರೂ, ಎರಡೂ ಸರಿಯಾಗಿ ಮಾಡಿಲ್ಲ ಎಂದು ಪ್ರಾಣಿಪ್ರಿಯರು ಆರೋಪಿಸಿದ್ದಾರೆ.
ಹೈಕೋರ್ಟ್ ವಕೀಲರು ಹಾಗೂ ಕಬ್ಬನ್ ಪಾರ್ಕ್ ನಡಿಗೆದಾರರ ಸಂಘದ ಅಧ್ಯಕ್ಷರಾಗಿರುವ ಡಾ. ಉಮೇಶ್ ಮಾತನಾಡಿ, ಬೆಂಗಳೂರಲ್ಲಿ ನಾಯಿಗಳು ಹಿಂಡು ಹಿಂಡಾಗಿ ಹೋದರೂ ಪಾಲಿಕೆ ಕ್ರಮ ಕೈಗೊಂಡಿಲ್ಲ. ಮಕ್ಕಳಿಗೆ ಯಾವಾಗ ಕಚ್ಚುತ್ತವೆ ಎನ್ನುವ ಭಯ ಯಾವತ್ತೂ ಇದ್ದೇ ಇರುತ್ತದೆ. ಒಂದು ನಾಯಿಯ ಶಸ್ತ್ರಚಿಕಿತ್ಸೆಗೆ 1,400 ರೂಪಾಯಿ ಕೊಟ್ಟರೂ, ಸರಿಯಾಗಿ ಮಾಡುತ್ತಿಲ್ಲ. ಊಟವನ್ನೂ ಹಾಕಿಲ್ಲ. ಕಬ್ಬನ್ ಪಾರ್ಕ್ ನಡಿಗೆದಾರರ ಸಂಘ ಹಾಗೂ ಸ್ಥಳೀಯರೇ ಊಟ ಹಾಕ್ತಾರೆ. ಎನ್ಜಿಒಗಳು ಹಾಕುತ್ತಿಲ್ಲ. ಬರೀ ಮಾಫಿಯಾದಲ್ಲಿ ತೊಡಗಿದೆ ಎಂದರು.
ಪ್ರಾಣಿಪ್ರಿಯೆ ನಿರ್ಮಲಾ ಮಾತನಾಡಿ, ಲಾಕ್ಡೌನ್ನಲ್ಲಿ ಬೀದಿನಾಯಿಗಳ ಮೇಲಿನ ಹಲ್ಲೆಯೇ ಹೆಚ್ಚಾಗಿದೆ. ಬೊಮ್ಮನಹಳ್ಳಿ ವಲಯದಲ್ಲಿ 2019 ಆಗಸ್ಟ್ ತಿಂಗಳಿಂದಲೂ ಎಬಿಸಿ ಚಿಕಿತ್ಸೆ ನಡೆದಿಲ್ಲ. ಜನರು ಬೀದಿ ನಾಯಿಗಳ ಮೇಲೆ ಹಲ್ಲೆ ಮಾಡುವುದು, ಕಲ್ಲು ಬಿಸಾಡುವುದನ್ನು ಮಾಡುತ್ತಿದ್ದಾರೆ. ಲಾಕ್ಡೌನ್ ಅವಧಿಯಲ್ಲಿ ಬೀದಿನಾಯಿಗಳಿಗೆ ಊಟ ಹಾಕುವಂತೆ, ಹಲ್ಲೆ ಮಾಡದಿರಲು ತಿಳಿಸಲು, ಜನಜಾಗೃತಿ ಮೂಡಿಸಲು ಪಾಲಿಕೆಗೆ ಒಳ್ಳೆಯ ಅವಧಿಯಾಗಿತ್ತು. ಆದ್ರೆ ಇದನ್ನು ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.