ಬೆಂಗಳೂರು: ಅಧಿಕಾರಕ್ಕೆ ಬಂದು ನೂರು ದಿನ ಕಳೆದರೂ ಮೇಕೆದಾಟು ಯೋಜನೆ ಅನುಷ್ಠಾನದ ಬಗ್ಗೆ ಕಾಂಗ್ರೆಸ್ ಏಕೆ ಏನು ಮಾತನಾಡುತ್ತಿಲ್ಲ?. ಬೆಂಗಳೂರಿಗೆ ಅಗತ್ಯ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರವೇನು? ಆದ್ದರಿಂದ ಸಂಭ್ರಮಾಚರಣೆ ಅರ್ಥಹೀನವಾಗಿ ತೋರುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ಮೋಹನ್ ದಾಸರಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದು ನೂರು ದಿನಗಳು ಪೂರೈಸಿದ ಹಿನ್ನೆಲೆ ಹೇಳಿಕೆ ಬಿಡುಗಡೆ ಮಾಡಿರುವ ಮೋಹನ್ ದಾಸರಿ, ಸಂಭ್ರಮಾಚರಣೆ ಮಾಡಲು ಕಾಂಗ್ರೆಸ್ ಯಾವ ಸಾಧನೆ ಮಾಡಿದೆ? ಎಂದು ಪ್ರಶ್ನಿಸಿದ್ದಾರೆ.
ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯ ಮತ್ತು ಗೃಹಜ್ಯೋತಿ ಯೋಜನೆಯ ವಿದ್ಯುತ್ ಉಚಿತ ಸೌಲಭ್ಯವನ್ನು ಹೊರತು ಪಡಿಸಿ ಬೇರೆ ಏನು ಸಾಧನೆ ಮಾಡಿದ್ದಾರೆ?. ಚುನಾವಣೆಗೂ ಮುನ್ನ ಐದು ಗ್ಯಾರಂಟಿಗಳನ್ನು ಘೋಷಿಸಿ ನುಡಿದಂತೆ ನಡೆಯುವ ಸರ್ಕಾರ ಎಂದಿದ್ದರು. ಅಧಿಕಾರಕ್ಕೆ ಬಂದ ಬಳಿಕ ತಮ್ಮದೇ ನುಡಿಯನ್ನು ಅನುಸರಿಸುತ್ತಿಲ್ಲ ಏಕೆ? ಎಂದು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಜ್ಯದ ನಿಜವಾದ ಸಮಸ್ಯೆಗಳ ಬಗ್ಗೆ ಗಮನ ಹರಿಸಲಾಗುತ್ತಿಲ್ಲ. ಬೆಂಗಳೂರಲ್ಲಿ ರಸ್ತೆಗುಂಡಿಗಳ ಸಮಸ್ಯೆ ಹೆಚ್ಚಾಗುತ್ತಲೇ ಇದೆ. ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ಡಿಸಿಎಂ ಡಿ ಕೆ ಶಿವಕುಮಾರ್ ಸಮಸ್ಯೆಗಳನ್ನು ಆಲಿಸುತ್ತಿದ್ದೇನೆ ಎಂದು ಸುತ್ತಾಡುತ್ತಿದ್ದಾರೆ. ಅವರೇನು ವಿರೋಧ ಪಕ್ಷದಲ್ಲಿಲ್ಲ. ತಮ್ಮದೇ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದಾರೆ. ಬ್ರಾಂಡ್ ಬೆಂಗಳೂರು ಮಾಡುತ್ತೇನೆಂದು ಹೇಳಿಕೊಳ್ಳುತ್ತಿದ್ದಾರೆ. ಬೆಂಗಳೂರಿನ ಸಮಸ್ಯೆಗಳೇನು ಎಂಬ ಅರಿವಿದ್ದುಕೊಂಡು ಪುನಃ ಆಲಿಸುವ ನಾಟಕ ಏಕೆ ಮಾಡುತ್ತಿದ್ದೀರಿ?. ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಿ ಎಂದಿದ್ದಾರೆ. ರಾಜ್ಯದಲ್ಲಿ ಮಳೆಯೇ ಇಲ್ಲದ ಪರಿಸ್ಥಿತಿ ಇದೆ. ರಾಜ್ಯದ ರೈತರ ಸಂಕಷ್ಟದ ದಿನಗಳನ್ನು ಲೆಕ್ಕಿಸದೆ ತಮಿಳುನಾಡಿಗೆ ಕಾವೇರಿ ನದಿ ನೀರನ್ನು ಹರಿಸಲಾಗುತ್ತಿದೆ. ನಾಡು, ನುಡಿ, ಜಲಕ್ಕೆ ಬದ್ಧ ಎಂದರೆ ಇದೇನಾ? ಎಂದು ಪ್ರಶ್ನಿಸಿದ್ದಾರೆ.
ಹಿಂದಿನ ಸರ್ಕಾರದ 40% ಕಮಿಷನ್, ಪೇಸಿಎಂ ವಿರುದ್ಧ ಸಿಎಂ ಸಿದ್ದರಾಮಯ್ಯ ರಾಜ್ಯಾದ್ಯಂತ ಹೋರಾಟ ಮಾಡಿ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಗುತ್ತಿಗೆದಾರರ ಬಾಕಿ ಪಾವತಿಗೆ 20% ಕಮಿಷನ್ ಕೇಳುತ್ತಿರುವ ಆರೋಪ ಕೇಳಿಬಂದಿದೆ. ಡಿ ಕೆ ಶಿವಕುಮಾರ್ ವಿರುದ್ಧವೇ ದೂರುಗಳು ವ್ಯಕ್ತವಾಗಿವೆ. ಬೆನ್ನಲ್ಲೇ ಕೃಷಿ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಯಿಂದ ತಿಂಗಳಿಗೆ ತಲಾ 6 ರಿಂದ 8 ಲಕ್ಷ ರೂ. ಕಮಿಷನ್ ಅನ್ನು ಕೃಷಿ ಸಚಿವ ಚಲುವರಾಯಸ್ವಾಮಿ ಕೇಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕೇವಲ ಸರ್ಕಾರ ಬದಲಾಗಿದೆ, ಆದರೆ ಭ್ರಷ್ಟಾಚಾರ, ಕಮಿಷನ್ ದಂಧೆ, ವರ್ಗಾವಣೆ ದಂಧೆ ಎಲ್ಲವೂ ಮೊದಲಿನಂತೆ ಮುಂದುವರಿದಿದೆ. ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಸಿಗುತ್ತಿಲ್ಲ ಎಂದು ಶಾಸಕರು ದೂರುತ್ತಿದ್ದಾರೆ. ಹಾಗಿದ್ದರೆ ಸರ್ಕಾರದ ದುಡ್ಡು ಎಲ್ಲಿ ಹೋಯ್ತು?. ಅಭಿವೃದ್ಧಿ ಕೆಲಸಗಳಿಗೆ ಮೀಸಲಿಟ್ಟ ದುಡ್ಡನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸುತ್ತಿರುವುದು ಏಕೆ?. ಅಧಿಕಾರ ಹಿಡಿಯಲೇ ಬೇಕು ಎಂಬ ದುರಾಸೆಗೆ ಅವೈಜ್ಞಾನಿಕವಾಗಿ, ಅಧ್ಯಾಯನ ನಡೆಸದೆ ಏಕಾಏಕಿ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ರಾಜ್ಯದ ಹಿತಾಸಕ್ತಿಯನ್ನು ಬಲಿಕೊಟ್ಟಿರುವುದೇ ನಿಮ್ಮ ನೂರು ದಿನದ ಸಾಧನೆಯೇ? ಎಂದು ಮೋಹನ್ ದಾಸರಿ ಕಿಡಿಕಾರಿದ್ದಾರೆ.
ಇದನ್ನೂ ಓದಿ: ಬಿಜೆಪಿ ಸರ್ಕಾರದ ಕೋವಿಡ್ ಹಗರಣ ತನಿಖೆ ಆಗಲೇಬೇಕು: ಸಚಿವ ಸತೀಶ್ ಜಾರಕಿಹೊಳಿ