ಬೆಂಗಳೂರು: ಅಕ್ರಮ ಮರಳು ದಂಧೆ ಪ್ರಕರಣ ಮುಚ್ಚಿ ಹಾಕಲು ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿ ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ ಚನ್ನಣ್ಣನವರ ಅವರನ್ನು ಅಮಾನತು ಮಾಡಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಮ್ ಆದ್ಮಿ ಪಾರ್ಟಿಯ( ಆಪ್) ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್.ವಿ. ಸದಂ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಹೊರಡಿಸಿರುವ ಅವರು, ''ಕ್ರಷರ್ ಉದ್ಯಮಿ ಸೇರಿ ಹಲವರಿಂದ 3.96 ಕೋಟಿ ರೂ. ಮೊತ್ತ ವಂಚನೆಯಾಗಿದೆ ಎಂದು ಸಲ್ಲಿಕೆಯಾಗಿದ್ದ ದೂರು ಆಧರಿಸಿ ಆರೋಪಿಗಳ ವಿರುದ್ಧ ರವಿ ಡಿ ಚನ್ನಣ್ಣನವರ ಹಾಗೂ ಇತರ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸಬೇಕಾಗಿತ್ತು. ಆದರೆ, 'ಬೇಲಿಯೇ ಎದ್ದು ಹೊಲ ಮೇಯ್ತು' ಎಂಬ ಗಾದೆಯಂತೆ, ಪೊಲೀಸ್ ಅಧಿಕಾರಿಗಳೇ ಆರೋಪಿಗಳಿಂದ 50 ಲಕ್ಷ ರೂ. ಲಂಚ ಪಡೆದಿರುವ ಆರೋಪ ಕೇಳಿ ಬಂದಿದೆ. ಇಂತಹ ಗಂಭೀರ ಆರೋಪ ಹೊತ್ತಿರುವ ರವಿ.ಡಿ. ಚನ್ನಣ್ಣನವರ ಅವರು ಸಿಐಡಿ ಎಸ್ಪಿ ಹುದ್ದೆಯಲ್ಲಿ ಮುಂದುವರಿಯುವುದು ಸರಿಯಲ್ಲ. ತಕ್ಷಣವೇ ಅಮಾನತು ಮಾಡಿ ಸಮಗ್ರ ನ್ಯಾಯಾಂಗ ತನಿಖೆ ನಡೆಸಬೇಕು'' ಎಂದು ಆಗ್ರಹಿಸಿದರು.
''ಪ್ರಕರಣ ಸಂಬಂಧ ಮಂಜುನಾಥ್ ಎಂಬುವವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದರೂ, ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ರವಿ ಚನ್ನಣ್ಣನವರ 25 ಲಕ್ಷ, ಡಿವೈಎಸ್‌ಪಿ 15 ಲಕ್ಷ ಹಾಗೂ ಮತ್ತೊಬ್ಬ ಅಧಿಕಾರಿ 10 ಲಕ್ಷ ರೂ. ಸ್ವೀಕರಿಸಿರುವ ಕುರಿತು ದೂರಿನಲ್ಲಿ ಸ್ಪಷ್ವವಾಗಿ ಉಲ್ಲೇಖಿಸಲಾಗಿದೆ'' ಎಂದರು.
''ಪ್ರಭಾವಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲು ಕೂಡ ಪೊಲೀಸ್ ಅಧಿಕಾರಿಗಳು ಲಕ್ಷಗಟ್ಟಲೆ ಲಂಚ ಕೇಳಿರುವ ಮಾಹಿತಿ ದೂರಿನಲ್ಲಿದೆ. ಆರೋಪಗಳಿಗೆ ಸಂಬಂಧಿಸಿದ ಧ್ವನಿ ಮುದ್ರಣ, ವಾಟ್ಸ್ಆ್ಯಪ್ ಸಂದೇಶ ಮುಂತಾದ ಸಾಕ್ಷಿಗಳಿವೆ ಎಂದು ಮಂಜುನಾಥ್ ಹೇಳಿದ್ದಾರೆ. ಇದರ ಆಧಾರದಲ್ಲಿ ತನಿಖೆ ನಡೆಸಿ, ನೈಸರ್ಗಿಕ ಸಂಪತ್ತನ್ನು ಕೊಳ್ಳೆ ಹೊಡೆದವರಿಗೆ ಹಾಗೂ ಅವರನ್ನು ರಕ್ಷಣೆ ಮಾಡಿದವರಿಗೆ ಕಠಿಣ ಶಿಕ್ಷೆ ನೀಡಬೇಕು'' ಎಂದು ಜಗದೀಶ್.ವಿ. ಸದಂ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: 'ನನ್ನಮ್ಮ ಸೂಪರ್ ಸ್ಟಾರ್' ರಿಯಾಲಿಟಿ ಶೋ ಬಾಲಕಿ ಸಾವು ಪ್ರಕರಣ : ಟಿಪ್ಪರ್ ಚಾಲಕ ಅರೆಸ್ಟ್