ಬೆಂಗಳೂರು: ಸರ್ಕಾರಿ ಶಾಲೆಯ ಮೂಲಸೌಕರ್ಯಗಳ ಪರಿಶೀಲನೆಯ ಸಂದರ್ಭದಲ್ಲಿ ಶಾಸಕ ಎನ್.ಎ ಹ್ಯಾರಿಸ್ ಜೊತೆಗೆ ಆಗಮಿಸಿದ್ದ ಅವರ ಬೆಂಬಲಿಗರು ನಿಂದಿಸಿ ಬೆದರಿಕೆ ಹಾಕಿದ್ದಾರೆ. ಶೀಘ್ರ ಅವರನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಆಮ್ ಆದ್ಮಿ ಪಕ್ಷದ(ಆಪ್) ರಾಜ್ಯ ಕಾರ್ಯದರ್ಶಿ ಹಾಗೂ ಶಾಂತಿನಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಕೆ.ಮಥಾಯಿ ಅವರು ಅಶೋಕ ನಗರ ಪೊಲೀಸ್ ಠಾಣೆಗೆ ಶನಿವಾರ ದೂರು ನೀಡಿದ್ದಾರೆ.
"ಶಾಂತಿನಗರ ವಿಧಾನಸಭಾ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ಪರ ಮನೆಮನೆ ಪ್ರಚಾರ ಮಾಡಿದ ಸಂದರ್ಭದಲ್ಲಿ, ಇಲ್ಲಿನ ಸರ್ಕಾರಿ ಶಾಲೆಗಳು ಹಾಗೂ ಆರೋಗ್ಯ ಕೇಂದ್ರಗಳಲ್ಲಿ ಕನಿಷ್ಠ ಮೂಲಸೌಕರ್ಯಗಳು ಕೂಡ ಸರಿಯಾಗಿಲ್ಲ ಎಂದು ಜನರು ಅಳಲು ತೋಡಿಕೊಂಡರು. ಈ ಕುರಿತು ನಾವು ಪರಿಶೀಲನೆಗೆ ಮುಂದಾದೆವು. ನೀಲಸಂದ್ರದ ಸರ್ಕಾರಿ ಉರ್ದು ಶಾಲೆಗೆ ಶಾಸಕ ಹ್ಯಾರಿಸ್ ಅಧ್ಯಕ್ಷರಾಗಿದ್ದಾರೆ. ಅಲ್ಲಿ ಬಾಲಕಿಯರ ಶೌಚಾಲಯಕ್ಕೆ ಸರಿಯಾದ ಬಾಗಿಲುಗಳಿಲ್ಲದೇ ಹೆಣ್ಣುಮಕ್ಕಳು ಮುಜುಗರ ಅನುಭವಿಸುತ್ತಿದ್ದಾರೆ."
ಇದನ್ನೂ ಓದಿ: ಕರ್ನಾಟಕ ಬಿಜೆಪಿ ಚುನಾವಣಾ ಉಸ್ತುವಾರಿಯಾಗಿ ಧರ್ಮೇಂದ್ರ ಪ್ರಧಾನ್, ಸಹ ಉಸ್ತುವಾರಿಗಳಾಗಿ ಮನ್ಸೂಕ್ ಮಾಂಡವಿಯಾ, ಅಣ್ಣಾಮಲೈ ನೇಮಕ
"ಶಾಂತಿನಗರದ ಇನ್ನೂ ಹಲವು ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ಶೌಚಾಲಯಕ್ಕೆ ಹೋಗಬೇಕಾದ ಸಂದರ್ಭದಲ್ಲಿ ಪಾಠ ಕೇಳುವುದನ್ನು ಅರ್ಧಕ್ಕೆ ನಿಲ್ಲಿಸಿ ತಮ್ಮ ಮನೆಗೆ ಹೋಗಿಬರಬೇಕಾಗಿದೆ. ಆಸ್ಪತ್ರೆಯೊಂದರ ಕಟ್ಟಡವು ಸಂಜೆ-ರಾತ್ರಿ ವೇಳೆ ಗಾಂಜಾ ಸೇವನೆ, ಮದ್ಯ ಸೇವನೆಗೆ ಬಳಕೆಯಾಗುತ್ತಿದೆ ಎಂಬ ಆರೋಪದ ಕುರಿತು ಪರಿಶೀಲಿಸಿದಾಗ, ಅಲ್ಲಿ ಸಾಲುಸಾಲು ಮದ್ಯದ ಬಾಟಲಿಗಳು ಕಂಡುಬಂದವು" ಎಂದು ಅವರು ಹೇಳಿದರು.
"ಸರ್ಕಾರಿ ತಮಿಳು ಶಾಲೆಯಲ್ಲಿ ಕೇವಲ ಒಬ್ಬರು ಶಿಕ್ಷಕರು ಒಂದರಿಂದ ಐದನೇ ತರಗತಿಯ ಎಲ್ಲ ಹತ್ತು ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಾರೆ. ಇದನ್ನು ಪರಿಶೀಲಿಸುತ್ತಿದ್ದಾಗ ಶಾಸಕ ಹ್ಯಾರಿಸ್ ಹಾಗೂ ಅವರ ಬೆಂಬಲಿಗರು ಆಗಮಿಸಿದರು. ಅವರ ಬೆಂಬಲಿಗರು ನಮ್ಮನ್ನು ನಿಂದಿಸಿ, ಬೆದರಿಕೆ ಒಡ್ಡಿದರು. ಕ್ಷೇತ್ರದಲ್ಲಿನ ಗೂಂಡಾಗಿರಿಗೆ ಅಂತ್ಯ ಹಾಡಬೇಕು ಹಾಗೂ ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳಿಸಬಾರದೆಂಬ ಉದ್ದೇಶದಿಂದ ಪೊಲೀಸರಿಗೆ ದೂರು ನೀಡಿದ್ದೇವೆ. ಸರ್ಕಾರಿ ಶಾಲೆಗಳು, ಸರ್ಕಾರಿ ಆರೋಗ್ಯ ಕೇಂದ್ರಗಳು ಅಭಿವೃದ್ಧಿ ಹೊಂದಿ, ಜನಸಾಮಾನ್ಯರಿಗೆ ನೆರವಾಗಬೇಕೆಂಬುದು ಆಮ್ ಆದ್ಮಿ ಪಕ್ಷದ ದೃಢ ನಿಲುವು. ಇಂತಹ ಬೆದರಿಕೆಗಳಿಗೆ ಹೆದರಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ" ಎಂದು ತಿಳಿಸಿದರು.
ಇದನ್ನೂ ಓದಿ: ಕರ್ನಾಟಕಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಬಂದ ವ್ಯಕ್ತಿ: ಉಗ್ರ ಎಂಬ ಶಂಕೆ ಮೇಲೆ ಅಮೃತಸರದಲ್ಲಿ ಬಂಧಿ!
'ಸ್ಪರ್ಧಿಸದಂತೆ ಬೆದರಿಕೆ': ಶಾಂತಿನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಬಾರದೆಂದು ಅಲ್ಲಿನ ಶಾಸಕರ ಪರ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿರುವ ಅಧಿಕಾರಿಯೊಬ್ಬರು ಬೆದರಿಕೆ ಹಾಕಿರುವುದಾಗಿ ಕೆ.ಮಥಾಯಿ ಇತ್ತೀಚೆಗೆ ಆರೋಪಿಸಿದ್ದರು. ಅಧಿಕಾರಿಯೊಬ್ಬರು ಬೆದರಿಕೆ ಹಾಕಿದ್ದಾರೆ ಎನ್ನಲಾದ ಆಡಿಯೋ ಕೂಡ ಬಿಡುಗಡೆ ಮಾಡಿದ್ದರು.